ಗಂಭೀರ ಪರಿಸ್ಥಿತಿ ನಿರ್ವಹಣೆಗೆ ಸಜ್ಜಾಗಿ

18CBP2
Published on

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲಿ ಕರೊನಾ ಸೋಂಕು ನಿಯಂತ್ರಣದ ಕುರಿತು ಶನಿವಾರ ಜಿಲ್ಲಾಧಿಕಾರಿ ಆರ್.ಲತಾ ವೈದ್ಯರು, ತಾಲೂಕುಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತ್ಯೇಕವಾಗಿ ಚರ್ಚಿಸಿದರು.

ವೈದ್ಯರು ಹಾಗೂ ಶುಶ್ರೂಷಕಿಯರು, ಸಿಬ್ಬಂದಿ ಕುಂದುಕೊರತೆ, ಕರೊನಾ ಆಸ್ಪತ್ರೆ ನಿರ್ವಹಣೆ, ಪರಿಸ್ಥಿತಿಗೆ ಅನುಗುಣವಾಗಿ ವಹಿಸಬೇಕಾದ ಕ್ರಮಗಳು, ವೈದ್ಯರು ಮತ್ತು ಸಿಬ್ಬಂದಿ ಸುರಕ್ಷತೆ ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಪರಿಸ್ಥಿತಿ ನೋಡುತ್ತಿದ್ದರೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಪರಿಸ್ಥಿತಿ ನಿಭಾಯಿಸಲು ಪ್ರತಿಯೊಬ್ಬರು ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಅಭಯವಿತ್ತರು.

ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು. ಆಸ್ಪತ್ರೆಯಲ್ಲಿನ ಔಷಧ ದಾಸ್ತಾನಿನ ದಾಖಲೆಗಳನ್ನು ಕಾಲ ಕಾಲಕ್ಕೆ ಪರಿಶೀಲಿಸುತ್ತ ಹೆಚ್ಚಿನ ಔಷಧದ ಅವಶ್ಯವಿದ್ದಲ್ಲಿ ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.

ಸೋಂಕಿತರಿಗೆ ಉತ್ತಮ ಉಟೋಪಚಾರ, ಔಷಧ ಸೇರಿ ಅಗತ್ಯ ವ್ಯವಸ್ಥೆ ಒದಗಿಸುವ ಮೂಲಕ ಯಾವುದೇ ಲೋಪಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಪ್ರತಿ ರೋಗಿ ಮೇಲೂ ನಿಗಾ ವಹಿಸುವ ಜತೆಗೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಲಹೆ ನೀಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ರಮೇಶ್, ಆರ್‌ಎಂಒ ಡಾ.ವಿಜಯಾ ಇತರರಿದ್ದರು.

ಸುರಕ್ಷತೆಯಲ್ಲಿ ನಿರ್ಲಕ್ಷ್ಯ ಬೇಡ: ಕರೊನಾ ನಿಯಂತ್ರಣ, ಸೋಂಕಿತರ ರಕ್ಷಣೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಆರ್. ಲತಾ, ವೈದ್ಯರು ಮತ್ತು ಇತರ ಸಿಬ್ಬಂದಿ ಸುರಕ್ಷತೆ ವಿಚಾರದಲ್ಲಿ ಜಾಗೃತರಾಗಿರಬೇಕು. ಸಮಸ್ಯೆಗಳು ಎದುರಾದಲ್ಲಿ ತಕ್ಷಣ ಗಮನಕ್ಕೆ ತರುವಂತೆ ಸೂಚಿಸಿದರು.

ನಿರ್ಲಕ್ಷ್ಯಕ್ಕೆ ಶಿಸ್ತು ಕ್ರಮ ಅನಿವಾರ್ಯ: ಸೋಂಕು ನಿಯಂತ್ರಣಕ್ಕೆ ಶ್ರಮಿಸುವುದೇ ಪ್ರಸ್ತುತ ನಮ್ಮೆಲ್ಲರ ಕರ್ತವ್ಯವಾಗಿದೆ, ಹೆಚ್ಚಿನ ಶ್ರಮ ವಹಿಸಿ ಕರೊನಾ ಹರಡುವಿಕೆಯನ್ನು ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ತಾಲೂಕುಮಟ್ಟದ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲೆಯ ಹಲವೆಡೆ ಉತ್ತಮ ನಿರ್ವಹಣೆ, ಉತ್ಸಾಹದ ಕೆಲಸ ಕಂಡು ಬರುತ್ತಿದ್ದರೆ, ಕೆಲವೆಡೆ ಸಮಸ್ಯೆಗಳು ಕಾಡುತ್ತಿವೆ. ಇದು ಸರಿ ಹೋಗಬೇಕು, ಇಲ್ಲದಿದ್ದಲ್ಲಿ ನಿರ್ಲಕ್ಷ್ಯಕ್ಕೆ ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ ಅವರು, ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಮುಲಾಜಿಲ್ಲದೇ ದಂಡ ವಿಧಿಸುವುದು, ನಿರ್ಲಕ್ಷ್ಯ ತೋರುತ್ತಿರುವ ಅಂಗಡಿ ಮಾಲೀಕರ ಪರವಾನಿಗೆ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜೆ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net