ಗಂಗಾಮತಸ್ತ ಸಮುದಾಯದ ಅಭಿವೃದ್ಧಿಗೆ ಬದ್ಧ

Gangamathastha
Published on

ಚಿತ್ರದುರ್ಗ: ಗಂಗಾಮತಸ್ತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯ ಸ್ಥಾಪಿಸಲು 5 ಎಕರೆ ಜಾಗ ನೀಡುವ ಕುರಿತು ಚರ್ಚಿಸಿದ ನಂತರ ಕ್ರಮವಹಿಸಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಭರವಸೆ ನೀಡಿದರು.

ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದಿಂದ ಭಾನುವಾರ ಮಹರ್ಷಿ ವೇದವ್ಯಾಸ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮದಕರಿಪುರ ಸಮೀಪ ಮೀನುಗಾರಿಕೆ ತರಬೇತಿಗೆ ಅವಕಾಶ ಕಲ್ಪಿಸಲಾಗುವುದು. ಸಮುದಾಯದ ನೂರು ಮಂದಿಗೆ ನಿವೇಶನ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಒಬ್ಬರನ್ನು ನಗರಸಭೆಗೆ ನಾಮನಿರ್ದೇಶನ ಮಾಡಲು ಶಿಫಾರಸು ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಗಂಗಾಮತಸ್ತ ಸಮಾಜವನ್ನು ಎಸ್ಟಿಗೆ ಸೇರಿಸುವ ಕುರಿತು ಸರ್ಕಾರಗಳ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವಿಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಮಾತನಾಡಿ, ಮಹರ್ಷಿ ವೇದವ್ಯಾಸ, ಭೀಷ,್ಮ ಮಾತಾ ಅಮೃತಾಮಯಿ ಅವರಿಂದಾಗಿ ಸಮಾಜಕ್ಕೆ ಹೆಮ್ಮೆ ಇದೆ. ಎಸ್ಟಿ ಪಟ್ಟಿಗೆ ಸೇರುವ ಅರ್ಹತೆ ಹೊಂದಿದ್ದು, ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಅಗತ್ಯ ದಾಖಲೆ ಒದಗಿಸಿ, ಬೇಡಿಕೆ ಈಡೇರಿಸಬೇಕು ಎಂದು ಕೋರಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಾನೂ ಪ್ರಯತ್ನಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಹಿಂದುಳಿದ, ಶೋಷಿತ, ದುರ್ಬಲರ, ಅವಕಾಶ ವಂಚಿತ ಸಮಾಜಗಳ ಪರವಾಗಿ ಕೆಲಸ ಮಾಡಲಿದೆ. ಕುಲಕಸುಬಾದ ಮೀನು ಕೃಷಿ ಉತ್ತೇಜಿಸಲು ಅಗತ್ಯ ಸಹಕಾರ ನೀಡುವಂತೆ ಸಿಎಂ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು.

ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಗಂಗಾಮತಸ್ತ ನನಗೂ ಅತ್ಯಂತ ಆತ್ಮೀಯವಾದ ಸಮಾಜ. ನಿಮ್ಮವರು ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಬೆರೆಯುತ್ತಾರೆ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ರವಿಕುಮಾರ್ ಸಹಕಾರವೂ ಇದೆ. ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಸಂಘದ ಅಧ್ಯಕ್ಷ ಎಚ್.ಡಿ.ರಂಗಯ್ಯ ಮಾತನಾಡಿ, ಮೀನುಗಾರಿಕೆ, ಸುಣ್ಣ-ಬಣ್ಣದ ಕೆಲಸ ಮಾಡಿಕೊಂಡು ಕಷ್ಟದಿಂದ ಬದುಕುವ ಸಮಾಜ ನಮ್ಮದು. ಅನೇಕರು ಈಗಲೂ ಬಡತನದಲ್ಲಿದ್ದಾರೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿಯೂ ಹಿಂದುಳಿದಿದ್ದು, ಸಮುದಾಯಕ್ಕೆ ನ್ಯಾಯ ಸಿಗಬೇಕಾದರೆ, ಎಸ್ಟಿ ಮೀಸಲಾತಿ ಸೌಲಭ್ಯ ಸರ್ಕಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಅಸಂಘಟಿತ ಸಮಾಜವೇ ಸಮುದಾಯ ಭವನ ನಿರ್ಮಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ರಾಜಕೀಯವಾಗಿಯೂ ನಿಮ್ಮವರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಶಾಂತಭೀಷ್ಮ ಚೌಡಯ್ಯ ಸಾನಿಧ್ಯ ವಹಿಸಿದ್ದರು. ಇದೇ ವೇಳೆ ನಿವೃತ್ತ ಅಧಿಕಾರಿಗಳಾದ ಡಿ.ಎನ್.ಬಾಲಕೃಷ್ಣ, ಎನ್.ಆರ್.ನಾಗರಾಜಪ್ಪ, ಡಿ.ಶಿವಲಿಂಗಪ್ಪ, ಎಸ್.ಮಂಜುನಾಥ್, ಆರ್.ಪ್ರಕಾಶ್, ಎನ್.ಎಚ್.ರಂಗಪ್ಪ, ಜಿ.ರಂಗಸ್ವಾಮಿ, ಪಿಎಂಜಿಎಸ್‌ವೈ ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್, ರಾಜ್ಯ ಗುಪ್ತವಾರ್ತೆ ನಿರ್ದೇಶಕ ಎಂ.ನಂದಗಾವ್, ಡಾ.ಎಸ್.ಪಿ.ಬಸವಂತ್, ಡಾ.ಎಚ್.ಟಿ.ತೇಜಸ್ವಿ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net