

ಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮದ ಎಪಿಎಂಸಿ ಉಪಪ್ರಾಂಗಣದಲ್ಲಿ ಭಾನುವಾರ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಯೋಜಿಸಿದ್ದ ಗಂಗಾಪೂಜೆ,ಬಾಗಿನ ಸಮರ್ಪಣೆ ಹಾಗೂ ಹರಿಶಿನ, ಕುಂಕುಮ ವಿತರಣೆ ಕಾರ್ಯಕ್ರಮ ಮೂವರು ಮಾಜಿ ಮುಖ್ಯಮಂತ್ರಿಗಳ ಹೊಗಳಿಕೆ ವೇದಿಕೆಯಾಗಿ ಮಾರ್ಪಟ್ಟಿತ್ತು.
ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಾರು ಕೋಟಿ ರೂ.ಅನುದಾನ ನೀಡಿದ್ದು ಅವರ ಕೊಡುಗೆಯನ್ನು ಸದನದಲ್ಲೇ ಪ್ರಶಂಸಿದ್ದೇನೆ. ಹಾಗೆಯೇ ಬಿ.ಎಸ್.ಯಡಿಯೂರಪ್ಪ ಕೂಡ ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಮ್ಮದೇ ಕೊಡುಗೆ ನೀಡಿದ್ದಾರೆ. ಮತ್ತೋರ್ವ ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ತಾಲೂಕಿಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿದ್ದಾರೆ. ಸಹಾಯ ಮಾಡಿದವರನ್ನು ಸ್ಮರಿಸುವ ಗುಣ ನಮ್ಮದಾಗಬೇಕು ಎನ್ನುವ ಮೂಲಕ ಮೂರು ಪಕ್ಷಗಳ ಪ್ರಮುಖ ಮುಖಂಡರ ಮನ ತಣಿಸುವ ಮಾತುಗಳನ್ನಾಡಿದ್ದು ನೆರದಿದ್ದವರನ್ನು ಅಚ್ಚರಿಗೆ ದೂಡಿತು.
ಕಳೆದ ಹದಿನೈದು ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದರು. ಇದರಿಂದ ಆಘಾತಗೊಂಡು ಆಸ್ಪತ್ರೆ ಸೇರಿದ್ದ ನನ್ನನ್ನು ಸಿದ್ದರಾಮಯ್ಯ ಭೇಟಿ ಮಾಡಿ ಅನುದಾನದ ಭರವಸೆ ನೀಡಿದ್ದರು.ಇದರಿಂದಾಗಿ ಗ್ರಾಮೀಣ ಪ್ರದೇಶಕ್ಕೆ ಹೇಮಾವತಿ ನದಿ ಮೂಲದಿಂದ ನೀರು ಹರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ವಾಗ್ದಾಳಿ: ಕ್ಷೇತ್ರದಲ್ಲಿ ಎಲ್ಲ ಗ್ರಾಮಗಳಲಲ್ಲಿ ದೇಗುಲಗಳ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿದ್ದೇನೆ.ಗಂಗಾ ಕಲ್ಯಾಣ ಯೋಜನೆಯಡಿ ರೈತ ಫಲಾನುವಿಗಳಿಗೆ ಸರ್ಕಾರ ವಿದ್ಯುತ್ ಪರಿವರ್ತಕ ನೀಡಲು ಪರದಾಡುತ್ತಿದೆ. ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳಕ್ಕೂ ಆಗ್ರಹಿಸಿ ಹೋರಾಟ ನಡೆಸಿದ್ದೇನೆ. ಸ್ವಸಹಾಯ ಸಂಘಗಳ ನೆರವಿಗೆ ಧಾವಿಸದಿದ್ದರೆ ಉಳಿಗಾಲವಿಲ್ಲ ಎಂಬುದನ್ನು ಮರೆಯಬಾರದು.ರಸಗೊಬ್ಬರ, ಗ್ಯಾಸ್ ಬೆಲೆ ಹೆಚ್ಚಳದಿಂದ ಜನರು ತೊಂದರೆಗೆ ಸಿಲುಕಿದ್ದೇವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮುಗಿಬಿದ್ದರು: ಒಂದೆಡೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಜನರು ಸೀರೆ ಪಡೆಯಲು ಮುಗಿಬೀಳುತ್ತಿದ್ದರು. ಇದನ್ನು ಕಂಡ ಶಾಸಕರು ಸರತಿ ಸಾಲಿನಲ್ಲಿ ಕುಳಿತರೆ ಮಾತ್ರವೇ ಸೀರೆ ನೀಡುವು ಎಂದು ಎಷ್ಟೇ ಹೇಳಿದರೂ ಮಹಿಳೆಯರು ಯಾವುದಕ್ಕೂ ಕಿವಿಗೊಡದೆ ನಾಮುಂದು, ತಾಮುಂದು ಎಂದು ಎಡತಾಕುತ್ತಿದ್ದ ದೃಶ್ಯ ವೈರಲ್ ಆಗಿದೆ. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ಜಿಪಂ ಮಾಜಿ ಸದಸ್ಯ ಬಿಳಿಚೌಡಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಅಜಪ್ಪ,ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಬಾಯಿ,ಶಾನೆಗೆರೆ ಗ್ರಾಪಂ ಸದಸ್ಯೆ ಮಾಲಾ ಬಾಬು, ಭಾಗ್ಯಮ್ಮ, ರವಿನಾಯ್ಕ, ಬಾಣಾವರ ಜಯಣ,ನಾಗರಾಜ್, ಬಾಯ್ಲರ್ ಕುಮಾರ್ ಇನ್ನಿತರರು ವೇದಿಕೆಯಲ್ಲಿದ್ದರು.