

ಹಾಸನ: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದ ಫಲಾನುಭವಿಗಳಿಗೆ ಹಾಸನ ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಶಾಸಕ ಸ್ವರೂಪ್ ಪ್ರಕಾಶ್ ಸಾಂಕೇತಿಕವಾಗಿ ಉಪಕರಣಗಳನ್ನು ವಿತರಿಸಿದರು.
ಮೋಟಾರ್, ಪೈಪುಗಳು, ವಿದ್ಯುತ್ ಬೋರ್ಡ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ವಿತರಿಸಿದ ಶಾಸಕರಿಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಂಜು ಕುಮಾರ್ ಹಾಗೂ ತಾ.ಪಂ ಅಭಿವೃದ್ಧಿಅಧಿಕಾರಿಗಳು ಸಾತ್ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಕಾರ್ಯಕ್ರಮಗಳ ಪೈಕಿ ಗಂಗಾ ಕಲ್ಯಾಣ ಯೋಜನೆ ಕೂಡ ಒಂದಾಗಿದೆ. ಕೃಷಿ ಭೂಮಿಗೆ ಕೊಳವೆ ಬಾವಿ ಮೂಲಕ ನೀರನ್ನು ಒದಗಿಸುವ ಸದುದ್ದೇಶ ಇದಾಗಿದೆ. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡು ಕೃಷಿ ಭೂಮಿಯಲ್ಲಿ ಉತ್ತಮ ಫಸಲು ಬೆಳೆದು ಲಾಭ ಪಡೆದು ಅಭಿವೃದ್ದಿ ಪಥದತ್ತ ಸಾಗಲಿ ಎಂದು ಶುಭ ಹಾರೈಸಿದರು.