ಗಂಗನಮಕ್ಕಿಯಲ್ಲಿ ಕಟ್ಟಡ ಕುಸಿತ

mdg house
ಮೂಡಿಗೆರೆಯ ಗಂಗನಮಕ್ಕಿ ಬಡಾವಣೆಯಲ್ಲಿ ಕಟ್ಟಡ ಕುಸಿದು ಕಾರು ಮತ್ತು ಬೈಕ್ ನಜ್ಜುಗುಜ್ಜಾಗಿರುವುದು.
Published on

ಮೂಡಿಗೆರೆ: ಮಳೆಯಿಂದಾಗಿ ಪಟ್ಟಣದ ಗಂಗನಮಕ್ಕಿ ಬಡಾವಣೆ ಮೂಡಿಗೆರೆ-ಕಡೂರು ರಾಷ್ಟ್ರೀಯ ಹೆದ್ದಾರಿ 173ರ ಬದಿಯಲ್ಲಿದ್ದ, ಎಂ.ಜಿ.ರಸ್ತೆ ನಿವಾಸಿ ಗೌರಮ್ಮ ಎಂಬುವರಿಗೆ ಸೇರಿದ ಕಟ್ಟಡ ಭಾನುವಾರ ಸಂಪೂರ್ಣ ಕುಸಿದಿದೆ. ಮನೆ ಮುಂಭಾಗ ನಿಲ್ಲಿಸಿದ ಓಮ್ನಿ ಕಾರು ಮತ್ತು ಬೈಕ್ ನಜ್ಜುಗುಜ್ಜಾಗಿವೆ.

ಮಳೆಯಿಂದ ಕಟ್ಟಡ ಶಿಥಿಲಗೊಂಡಿತ್ತು. ಎರಡು ದಿನಗಳಿಂದ ಮಳೆ ಕೊಂಚ ಬಿಡುವು ನೀಡಿತ್ತು. ಆಗಾಗ ತುಸು ಮಳೆ ಬಿಸಿಲಿನ ವಾತಾವರಣವಿತ್ತು. ಹಳೆಯ ಹೆಂಚಿನ ಕಟ್ಟಡವಾದ್ದರಿಂದ ಗಾಳಿ, ಮಳೆಗೆ ಶಿಥಿಲಗೊಂಡಿರುವುದು ಕಟ್ಟಡದ ಮಾಲೀಕರ ಗಮನಕ್ಕೆ ಬಂದಿರಲಿಲ್ಲ. ಕಟ್ಟಡದಲ್ಲಿ ಗ್ಯಾರೇಜ್ ನಡೆಯುತ್ತಿತ್ತು. ಪ್ರತಿ ದಿನ ಗ್ಯಾರೇಜ್ ತೆರೆದಿದ್ದಾಗ ವಾಹನಗಳನ್ನು ರಿಪೇರಿಗೆಂದು ನಿಲ್ಲಿಸಿ, ವಾಹನಗಳ ವಾರಸುದಾರರು ಗ್ಯಾರೇಜ್‌ನಲ್ಲಿರುತ್ತಿದ್ದರು. ಭಾನುವಾರವಾದ್ದರಿಂದ ಗ್ಯಾರೇಜ್ ಬಂದ್ ಆಗಿತ್ತು. ಹಾಗಾಗಿ ಜೀವಹಾನಿ ತಪ್ಪಿದೆ. ಕಟ್ಟಡದ ಹಿಂಭಾಗವನ್ನು ಬಾಡಿಗೆಗೆ ನೀಡಿದ್ದರು. ಕೆಲ ದಿನದ ಹಿಂದೆ ಬಾಡಿಗೆದಾರರು ಮನೆ ಖಾಲಿ ಮಾಡಿದ್ದರು. ಕಾರು ಮತ್ತು ಬೈಕ್‌ಗಳನ್ನು ರಿಪೇರಿಗೆಂದು ನಿಲ್ಲಿಸಲಾಗಿತ್ತು. ಕಟ್ಟಡದಲ್ಲಿ ಗ್ಯಾರೇಜ್‌ಗೆ ಸಂಬಂಧಪಟ್ಟ ಬೆಲೆಬಾಳುವ ವಸ್ತುಗಳಿದ್ದವು. ಕಟ್ಟಡ ಕುಸಿದಾಗ ಬಹುತೇಕ ವಸ್ತುಗಳು ನಾಶವಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net