

ಮೈಸೂರು
ಖೋ ಖೋ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ಬಿ.ಚೈತ್ರಾ ಅವರ ಮುಂದಿನ ಶಿಕ್ಷಣ ಹಾಗೂ ತರಬೇತಿಯ ಸಂಪೂರ್ಣ ವೆಚ್ಚವನ್ನು ನಮ್ಮ ಸಂಸ್ಥೆಯ ವತಿಯಿಂದ ಭರಿಸಲಾಗುವುದು ಎಂದು ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಘೋಷಿಸಿದರು.
ನಗರದ ಕಲಾಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಲನಹಳ್ಳಿಯ ಎಸ್‌ಎನ್‌ಎಸ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಚೈತ್ರಾ ಅವರು ನಮ್ಮ ಸಂಸ್ಥೆಯು ಕುರುಬೂರಿನಲ್ಲಿ ನಡೆಸುತ್ತಿರುವ ಪ್ರಿಯದರ್ಶಿನಿ ಕಾನ್ವೆಂಟ್‌ನ ಹಿರಿಯ ವಿದ್ಯಾರ್ಥಿನಿ. ಆಕೆಯ ಸಾಧನೆಗೆ ಎಲ್ಲ ರೀತಿಯ ನೆರವು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕುರಬೂರಿನಲ್ಲಿ ಸಂಸ್ಥೆಯ ವತಿಯಿಂದ ಹಾಗೂ ತಿ.ನರಸೀಪುರಲ್ಲಿ ವಿವಿಧ ಸಂಘಟನೆಗಳು ನಡೆಸಿದ ಸಮಾರಂಭದಲ್ಲಿ ನಾವು ಭಾಗವಹಿಸಿದ್ದಾಗಲೇ ಈ ವಿಷಯವನ್ನು ಹೇಳಬೇಕಿತ್ತು. ಆದರೆ ಎಲ್ಲರೂ ತವರಿಗೆ ಬಂದ ಚೈತ್ರಾಳನ್ನು ಅಭಿನಂದಿಸುವುದರಲ್ಲಿ ನಿರತರಾಗಿದ್ದರಿಂದ ಈಗ ಪ್ರಕಟಿಸುತ್ತಿರುವುದಾಗಿ ತಿಳಿಸಿದರು.
ಅದೇ ರೀತಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ಒಂದು ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುವುದು. 1ರಿಂದ 4ತರಗತಿವರೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಎಲ್ಲ ರೀತಿಯ ಚಟುವಟಿಕೆ ಕಲಿಸಲಾಗುವುದು. ವಿದ್ಯಾರ್ಥಿಗಳಲ್ಲಿರುವ ವಿಶೇಷ ಪ್ರತಿಭೆ ಗುರುತಿಸಿ, ತರಬೇತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಇವತ್ತು ಚೈತ್ರಾ ಖೋ ಖೋದಲ್ಲಿ ಸ್ಟಾರ್ ಆಗಲು ಆಟದಲ್ಲಿ ಆಕೆ ತೋರಿದ ಶ್ರಮ ಕಾರಣ. ಯಾವುದೇ ಕಾಯಕವನ್ನು ನಿಷ್ಠೆಯಿಂದ ಮಾಡಿದರೆ ಗುರಿ ತಲುಪಲು ಸಾಧ್ಯ ಎಂಬುದಕ್ಕೆ ಚೈತ್ರಾ ನಿದರ್ಶನ ಎಂದರು.
ಜೀವನವನ್ನು ವ್ಯರ್ಥ ಮಾಡಬಾರದು. ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಗೆ ನಿರಂತರವಾಗಿ ಶ್ರಮಪಡಬೇಕು. ಪಾಲಕರು ಕೂಡ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಸಂಸ್ಕಾರ ಕಲಿಸಬೇಕು ಎಂದರು.
ಖೋ ಖೋ ಮಹಿಳಾ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ಬಿ.ಚೈತ್ರಾ ಮಾತನಾಡಿ, ನನ್ನ ಸಾಧನೆಗೆ ನಮ್ಮೂರಿನಲ್ಲಿ ಶ್ರೀದೇಗುಲ ಮಠ ನಡೆಸುತ್ತಿರುವ ಶಾಲೆ, ಕಿರಿಯ ಶ್ರೀಗಳ ಉತ್ತೇಜನ ಹಾಗೂ ತರಬೇತುದಾರ ಮಂಜುನಾಥ್ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಪ್ರತಿಯೊಬ್ಬರೂ ಮುಂದೆ ಗುರಿ ಹಾಗೂ ಗುರು ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
‘ಟಗರುಪಲ್ಯ’ ಚಲನಚಿತ್ರದ ನಾಯಕ ನಾಗಭೂಷಣ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು, ಪುಸ್ತಕ ಓದಬೇಕು. ಕನ್ನಡ ಸಾಹಿತ್ಯ ಓದಬೇಕು. ಕಥೆಗಳನ್ನು ಓದಬೇಕು. ಒಳ್ಳೆಯ ಸಿನಿಮಾ ನೋಡಬೇಕು. ಆ ಮೂಲಕ ಕನ್ನಡ ಭಾಷೆಯ ಬೆಳವಣಿಗೆಯಾಗುತ್ತದೆ ಎಂದರು.
ಮನೆಯಿಂದ ಆಚೆ ಬಂದು ಸ್ನೇಹಿತರೊಂದಿಗೆ ಆಟವಾಡಬೇಕು. ಕಲೆ, ಕ್ರೀಡೆ, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ಹೇಳಿದರು.
‘ಟಗರುಪಲ್ಯ’ ಚಿತ್ರಕ್ಕೆ ನೀಡಿದಂತೆ ಮುಂದಿನ ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ‘ವಿದ್ಯಾರತಿ’ ಚಿತ್ರಕ್ಕೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಚಲನಚಿತ್ರದ ಒಂದೆರಡು ಸಂಭಾಷಣೆಗಳನ್ನು ಹೇಳಿ, ಸಭಿಕರನ್ನು ರಂಜಿಸಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಓದಿನ ಜತೆಗೆ ಉತ್ತಮ ಕೌಶಲ ರೂಪಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ ಬೆಳೆಸಿಕೊಂಡು ಗುರು- ಹಿರಿಯರಿಗೆ ಗೌರವ ನೀಡಬೇಕು. ಸಾಕಷ್ಟು ಅವಕಾಶಗಳು ಸಿಗುತ್ತಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ನಿರ್ದೇಶಕಿ ಎ.ಆರ್. ಮಮತಾಶ್ರೀ, ಪ್ರಿನ್ಸಿಪಾಲ್ ಬಿ. ಮಹದೇವಸ್ವಾಮಿ, ಶಿಕ್ಷಕರಾದ ಪುಷ್ಪಾ, ಪುಷ್ಪಾವತಿ, ಉಮಾ, ಎಚ್.ಸಿ. ನಾಗೇಂದ್ರ ಇದ್ದರು. ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.