ಖೋಟಾ ನೋಟು ಚಲಾವಣೆ, ರಾಣೆಬೆನ್ನೂರಿನ ವ್ಯಕ್ತಿ ಬಂಧನ

06 svr 04 a
Published on

ಸವಣೂರ: ಪಟ್ಟಣದ ಎಪಿಎಂಸಿ ಎದುರು ಹಾಗೂ ವಿವಿಧ ಸ್ಥಳಗಳಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ರಾತ್ರಿ ಜರುಗಿದೆ.

ಪಟ್ಟಣದ ಬಸ್ ನಿಲ್ದಾಣ ಎದುರಲ್ಲಿರುವ ಚಕ್ರಸಾಲಿ ಅವರ ಶಶಾಂಕ್ ಬೇಕರಿಯಲ್ಲಿ ಸಾಮಗ್ರಿಯನ್ನು ಖರೀದಿಸಿದ ರಾಣೆಬೆನ್ನೂರಿನ ಮೃತ್ಯುಂಜಯ ನಗರದ 5ನೇ ಕ್ರಾಸ್ ನಿವಾಸಿ ಸಂತೋಷ ಗುಜ್ಜರ (45) ಖೋಟಾ ನೋಟು ನೀಡಿದ್ದಾನೆ. ನಂತರ, ಎಪಿಎಂಸಿ ಎದುರಲ್ಲಿರುವ ಕಂಬಾಳಿಮಠ ಕಿರಾಣಿ ಅಂಗಡಿಯಲ್ಲೂ ಇದೇ ತರಹದ ನೋಟು ನೀಡಿದ್ದಾರೆ. ಅನುಮಾನಗೊಂಡ ಅಂಗಡಿ ಮಾಲೀಕರು ಸಾರ್ವಜನಿಕರ ಸಹಾಯದೊಂದಿಗೆ ಪೋಲಿಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಸಂತೋಷ ಸೂಕ್ತ ರೀತಿಯ ಉತ್ತರ ನೀಡದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ವಿವರಣೆಗಾಗಿ ರಾಣೆಬೆನ್ನೂರಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ 500 ರೂ. ಮುಖಬೆಲೆಯ ಒಂದೇ ಸಂಖ್ಯೆಯ ಸುಮಾರು 10 ಖೋಟಾ ನೋಟುಗಳು ಇರುವುದನ್ನು ಸಾರ್ವಜನಿಕರು ಖಾತ್ರಿ ಪಡಿಸಿಕೊಂಡಿದ್ದರು. ಸವಣೂರ ಪಿಐ ಬಿ.ಎಂ. ಶಶಿಧರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net