

ಮೈಸೂರು: ಕರ್ನಾಟಕ ವುಶು ಸಂಸ್ಥೆಯಿಂದ ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಖೇಲೋ ಇಂಡಿಯಾ ಮಹಿಳಾ ವುಶು ಲೀಗ್ ಪಂದ್ಯಾವಳಿಗೆ ರಾಜವಂಶಸ್ಥೆ ತ್ರಿಷಿಕಾಕುಮಾರಿ ಒಡೆಯರ್ ಚಾಲನೆ ನೀಡಿದರು.
ಕರ್ನಾಟಕ ವುಶು ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಅಶೋಕ ಡಿ.ಮೊಕಾಶಿ ಮಾತನಾಡಿ, ಭಾರತದಲ್ಲಿ ಆರಂಭಗೊಂಡ ವುಶು ಸಮರ ಕಲೆ ಚೀನಾದಲ್ಲಿ ಬೌದ್ಧ ಧರ್ಮದ ಜೊತೆಗೆ ಪ್ರಸಿದ್ಧಿ ಪಡೆದಿದೆ. ಇದರ ಮಹತ್ವವನ್ನು ಅರಿತು ಪ್ರಸ್ತುತ ಕೇಂದ್ರ ಸರ್ಕಾರವು ಈ ಕಲೆಗೆ ‘ಎ’ ಗ್ರೇಡ್ ಮಾನ್ಯತೆ ನೀಡಿ ಗೌರವಿಸಿದೆ. ಇದರಿಂದ ದೇಶದ ಎಲ್ಲ ಜಿಲ್ಲಾ ಮಟ್ಟದ ಅಸೋಸಿಯೇಷನ್‌ಗಳನ್ನು ರಚಿಸಿ ಕಲೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈಗ ಭಾರತದ ಕ್ರೀಡೆ ವಿಶ್ವ ಮಾನ್ಯತೆ ಪಡೆಯುತ್ತಿದೆ. ರಾಷ್ಟ್ರೀಯ ಕ್ರೀಡಾ ದಿನದಂದು 25 ರಾಜ್ಯದಲ್ಲಿ ಏಕ ಕಾಲದಲ್ಲಿ ಟೂರ್ನಿ ನಡೆಯುತ್ತಿದೆ ಎಂದು ತಿಳಿಸಿದರು.
2024ರ ಜನವರಿ ಮೊದಲ ವಾರದಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿ ನಡೆಯಲಿದೆ. ಈ ಬಾರಿ 18 ಜಿಲ್ಲೆಗಳಿಂದ 200 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಇಲ್ಲಿ ಪ್ರಶಸ್ತಿ ಪಡೆದ ಸ್ಪರ್ಧಾಳುಗಳು ದಕ್ಷಿಣ ವಲಯ ಹಾಗೂ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗುತ್ತಾರೆ ಎಂದು ಮಾಹಿತಿ ನೀಡಿದರು.
ಆಯೋಜಕರಾದ ಅಸೋಸಿಯೇಷನ್‌ನ ರಾಜು ವಿ.ನಾಯ್ಕರ್, ಎಂ.ಎ.ಧರ್ಮ, ಗಿರೀಶ್ ಇದ್ದರು.