ಮೈಸೂರು: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆ.29 ರಂದು ಆಯೋಜಿಸಿರುವ ಖೇಲೊ ಇಂಡಿಯಾ ಭಾರತೀಯ ಮಹಿಳಾ ವುಶು ಲೀಗ್ ಭಿತ್ತಿಪತ್ರವನ್ನು ಕರ್ನಾಟಕ ವುಶು ಸಂಸ್ಥೆ ವತಿಯಿಂದ ಬಿಡುಗಡೆ ಮಾಡಲಾಯಿತು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
ಮಹಿಳಾ ಸಬಲೀಕರಣಕ್ಕಾಗಿ ಈ ಕ್ರೀಡೆ ಆಯೋಜಿಸಲಾಗಿದೆ. ಅಂದು ದೇಶಾದ್ಯಂತ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ಪಂದ್ಯಾವಳಿ ನಡೆಯುತ್ತಿದ್ದು, ನಗರದಲ್ಲಿಯೂ ಆಯೋಜಿಸಲಾಗಿದೆ. ರಾಜವಂಶಸ್ಥೆ ತ್ರಿಶಿಕಾಕುಮಾರಿ ಒಡೆಯರ್ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಜಿ.ಡಿ.ಹರೀಶ್‌ಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಸ್‌ಪಿ ಸೀಮಾ ಲಾಟ್ಕರ್ ಇತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಹಿರಿಯ, ಕಿರಿಯ ಹಾಗೂ ಅತಿ ಕಿರಿಯ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂದೇ ಸಂಜೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಕೊಯಮತ್ತೂರಿನಲ್ಲಿ ಆಯೋಜಿಸಲಿರುವ ವಲಯ ಮಟ್ಟದ ಪಂದ್ಯಾವಳಿಯಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ದರ್ಶನ್, ಪ್ರಣತಿ, ಗಿರಿಧರ್, ಧರ್ಮ ಇದ್ದರು.