

ವಿಜಯಪುರ: ನಗರದ ವಾರ್ಡ್ ನಂ. 35ರ ಖುರೇಶಿ ಕಾಲನಿಯಲ್ಲಿ 20 ವರ್ಷಗಳಿಂದ ಸಮರ್ಪಕ ರಸ್ತೆಗಳಿಲ್ಲ. ಮಹಾನಗರ ಪಾಲಿಕೆಯಿಂದ ಸಿಸಿ ರಸ್ತೆಗಳನ್ನು ನಿರ್ಮಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಜನಸೇನೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಇಜಾಜಅಹ್ಮದ ಮುಕಬಿಲ್ ಮಾತನಾಡಿ, ಖುರೇಶಿ ಕಾಲನಿಯ ರಸ್ತೆಗಳು ಮಳೆ ನೀರಿನಿಂದ ಆವೃತಗೊಂಡಿವೆ. ಎಲ್ಲೆಡೆ ತಗ್ಗು ದಿನ್ನೆಗಳಿರುವ ಕಾರಣ ವಾಹನ ಸವಾರರು ತೀವ್ರ ಪರದಾಡುತ್ತಿದ್ದಾರೆ. ಕೂಡಲೇ ರಸ್ತೆ ನಿರ್ಮಿಸಬೇಕೆಂದರು.
ಸಾಜೀದಹುಸೇನ್ ರಿಸಾಲದಾರ್ ಮಾತನಾಡಿ, ಖುರೇಶಿ ಕಾಲನಿಯ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆನ್ನುವಂತಿದ್ದಾರೆ. ಜಿಲ್ಲಾಡಳಿತ ಕೂಡಲೇ ಕ್ರಮ ಜರುಗಿಸಬೇಕೆಂದರು. ಸಂಘಟನೆ ವಿವಿಧ ಪದಾಧಿಕಾರಿಗಳಿದ್ದರು.