

ಹುಮನಾಬಾದ್: ಬೀದರ್ ಜಿಲ್ಲೆಯ ರೈತರ ಜೀವನಾಡಿ ಹಳ್ಳಿಖೇಡ(ಬಿ)ದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ)ಯನ್ನು ಎಲ್‌ಆರ್‌ಒಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ (ಲೀಜ್) ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ, ಉಪಾಧ್ಯಕ್ಷ ವಿಶ್ವನಾಥ ಪಾಟೀಲ್ ಮಾಡಗೂಳ ಜತೆ ಸಿಎಂಗೆ ಮನವಿಪತ್ರ ಸಲ್ಲಿಸಿದ ಅವರು, ಬಿಎಸ್ಸೆಸ್ಕೆ ಜಿಲ್ಲೆಯ ಕೃಷಿಯಾಧಾರಿತ ಸಹಕಾರ ಕ್ಷೇತ್ರದ ಸಕ್ಕರೆ ಕಾರ್ಖಾನೆಯಾಗಿದ್ದು, ೧೯೬೮-೬೯ರಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸಿದ ಕಾರ್ಖಾನೆ ೨೫,೭೬೦ ಸದಸ್ಯರು, ೫೯೦ ಕಾರ್ಮಿಕರು ಮತ್ತು ಸುಮಾರು ೫೦೦೦ ಕೃಷಿ ಕೂಲಿಯಾಳುಗಳ ಜೀವನಾಧಾರವಾಗಿದೆ. ೩೫೦೦ ಟಿಸಿಡಿ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.
ಕಾರ್ಖಾನೆ ೧೧.೨೩ ಕೋಟಿ ರೂ. ಷೇರು ಬಂಡವಾಳದಲ್ಲಿ ೪.೬೩ ಕೋಟಿ ರೂ. ಸರ್ಕಾರದ ಬಂಡವಾಳವಿದೆ. ಸರ್ಕಾರದ ೨೦೨೩ರ ಜ.೧೦ರ ಆದೇಶ ಸಂಖ್ಯೆ ಸಿಪಿ ೧೦೭ ಸಿಓಎಫ್ ೨೦೨೨ (ಭಾಗ-೩)ರಂತೆ ಕಾರ್ಖಾನೆಯನ್ನು ಎಲ್ಆರ್ಒಟಿ ಆಧಾರದ ಮೇಲೆ ೪೦ ವರ್ಷ ಅವಧಿಗೆ ಲೀಜ್ ನೀಡಲು ಆದೇಶಿಸಲಾಗಿದೆ. ಆದರೆ ಎರಡು ಸಲ ಟೆಂಡರ್ ಕರೆದರೂ ಯಾರೊಬ್ಬರೂ ಭಾಗವಹಿಸಿಲ್ಲ. ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರ ಅಧ್ಯಕ್ಷತೆಯಲ್ಲಿ ಬೀದರ್ ಸಚಿವ-ಶಾಸಕರ ಸಮ್ಮುಖ ನಡೆದ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ನವರು ಹರಾಜು ಪ್ರಕ್ರಿಯೆ ರದ್ದುಪಡಿಸಿ ಕಾರ್ಖಾನೆಯನ್ನು ಎಲ್ಆರ್ಒಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ತೀರ್ಮಾನಿಸಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಗಮನ ಸೆಳೆದಿದ್ದಾರೆ.
ಸರ್ಕಾರ ಇತ್ತೀಚೆಗೆ ಕೆಲವೊಂದು ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಲೀಜ್ ಮೇಲೆ ನೀಡಿದೆ. ರೈತ ಸದಸ್ಯರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಬಿಎಸ್ಸೆಸ್ಕೆ ಲೀಜ್ ಪ್ರಕ್ರಿಯೆ ಪೂರ್ಣಗೊಳಿಸಿ ಪುನರಾರಂಭಿಸಲು ಅನುವು ಮಾಡಿಕೊಡುವಂತೆ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸುವಂತೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕೋರಿದ್ದಾರೆ.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಎಲ್ಆರ್ಒಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಿ ಪುನರಾರಂಭ ಮಾಡಬೇಕೆಂಬ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
| ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ