ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡಿ

DC NITESH PATIL (1)a
Published on

ಧಾರವಾಡ: ಜಿಲ್ಲೆಯ 31 ನೋಂದಾಯಿತ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜ. 7ರಿಂದ ಶೇ. 30ರಷ್ಟು ಹಾಗೂ ಜ. 10ರಿಂದ ಶೇ. 50ರಷ್ಟು ಬೆಡ್ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕೋವಿಡ್ ಸೊಂಕಿತರ ಚಿಕಿತ್ಸೆಗಾಗಿ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಗುರುವಾರ ಜರುಗಿದ ಆನ್​ಲೈನ್ ಸಭೆಯಲ್ಲಿ ಅವರು ಸೂಚಿಸಿದರು. ಆಸ್ಪತ್ರೆಗಳು ಹೊಂದಿರುವ ಐಸಿಯು, ಎಚ್​ಡಿಯು, ವೆಂಟಿಲೇಟರ್ ಮತ್ತು ಜನರಲ್ ಬೆಡ್​ಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಇದನ್ನು ಪರಿಶೀಲಿಸಲು ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಆರ್​ಸಿಎಚ್​ಒ ಡಾ. ಎಸ್.ಎಂ. ಹೊನಕೇರಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.
24,750 ರೂ. ದಂಡ ವಸೂಲಿ: ಕೋವಿಡ್ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಸಾರ್ವಜನಿಕರಿಂದ ಗುರುವಾರ 24,750 ರೂಪಾಯಿ ದಂಡ ವಸೂಲಿ ಮಾಡಿದೆ. ಮಾಸ್ಕ್ ಧರಿಸದ 91ಜನರಿಗೆ ಒಟ್ಟು 22,750 ರೂ. ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದ 10 ಜನರಿಗೆ ಒಟ್ಟು 2000 ರೂ. ದಂಡ ವಿಧಿಸಲಾಗಿದೆ. ಇಲ್ಲಿಯವರೆಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ದಂಡ ರೂಪದಲ್ಲಿ 75,44,400 ರೂ. ಸಂಗ್ರಹಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಆಧರಿಸಿ ಬಸ್ ಸಂಚಾರ: ಶುಕ್ರವಾರ ರಾತ್ರಿ 10ರಿಂದ ಜಾರಿಗೆ ಬರಲಿರುವ ವಾರಾಂತ್ಯದ ಕರ್ಫ್ಯೂ ವೇಳೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಕಾರ್ಯಾಚರಣೆ ನಡೆಸಲಾಗುವುದು ಎಂದು ವಾಕರಸಾ ಸಂಸ್ಥೆ ತಿಳಿಸಿದೆ.
‘ನಗರ ಸಾರಿಗೆ, ದೂರ ಪ್ರಯಾಣ ಹಾಗೂ ಯಾವುದೇ ಮಾದರಿಯ ಬಸ್ ಸಂಚಾರಕ್ಕೆ ನಿರ್ಬಂಧವಿಲ್ಲ. ಆದರೆ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಬುಧವಾರ ಹಾಗೂ ಗುರುವಾರದಂದು ದೂರ ಪ್ರಯಾಣದ ಬಸ್​ಗಳ ಕಾರ್ಯಾಚರಣೆಯಲ್ಲಿ ಶೇ. 30ರಿಂದ 40ರಷ್ಟು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಬಸ್ ಓಡಿಸಲಾಗುವುದು’ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ ಹುದ್ದಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ವಾರಾಂತ್ಯದ ಕರ್ಫ್ಯೂ ನಡುವೆಯೂ ಹುಬ್ಬಳ್ಳಿ ಎಪಿಎಂಸಿಯಲ್ಲಿ ಎಂದಿನಂತೆ ವಹಿವಾಟು ನಡೆಯಲಿದೆ. ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಸುರೇಶ ಕಿರೇಸೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net