ಖಾಸಗಿ ಶಿಕ್ಷಣಕ್ಕೆ ಕಡಿವಾಣ ಹಾಕಿ

27M.D.R.3
Published on

ಮದ್ದೂರು: ತಾಲೂಕಿನ ಭಾರತೀ ನಗರದಿಂದ ಚಿಕ್ಕರಸಿನಕೆರೆ, ಗುರುದೇವರಹಳ್ಳಿ, ಉಪ್ಪಾದೊಡ್ಡಿ, ನಗರಕೆರೆ ಮಾರ್ಗವಾಗಿ ಮದ್ದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವರೆಗೆ ಕನ್ನಡ ಸೇನೆ ಸಂಘಟನೆಯ ಮುಖಂಡರು ಬೈಕ್ ಜಾಥಾ ಮಾಡುವ ಮೂಲಕ ‘ಬನ್ನಿ ಮಕ್ಕಳೇ ಸರ್ಕಾರಿ ಶಾಲೆಗೆ ಸೇರಿ, ಸರ್ಕಾರಿ ಶಾಲೆಯನ್ನು ಉಳಿಸಿ’ ಘೋಷವಾಕ್ಯದೊಂದಿಗೆ ಶನಿವಾರ ವಿಭಿನ್ನ ರೀತಿಯಲ್ಲಿ ಜಾಗೃತಿ ಕೈಗೊಂಡರು.

ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಖಾಸಗಿ ಶಾಲೆಯ ಹಾವಳಿಗಳಿಂದ ಪಾಲಕರು ಬೇಸತ್ತು ಹೋಗಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಖಾಸಗಿ ಶಿಕ್ಷಣಕ್ಕೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಕರೆ ನೀಡಿದರು.

ಶಿಥಿಲ ವ್ಯವಸ್ಥೆ ತಲುಪಿರುವ ಶಾಲಾ ಕಟ್ಟಡಗಳನ್ನು ಶೀಘ್ರವಾಗಿ ಸರಿಪಡಿಸಿ, ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಜಾರಿಮಾಡಲು ಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಿರಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಿರಯ್ಯ, ಇಂತಹ ಹಲವಾರು ಸಂಘಟನೆಗಳ ನಿರಂತರ ಪ್ರಯತ್ನದಿಂದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು ಬಂದಿದ್ದೇವೆ. ಎಲ್ಲರ ಸಹಕಾರದಿಂದ ಮತ್ತಷ್ಟು ಉತ್ತಮ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಜಿಲ್ಲಾಧಿಕಾರಿಯಿಂದ ಶಿಥಿಲಗೊಂಡಿರುವ ಶಾಲೆಗಳನ್ನು ದುರಸ್ತಿ ಮಾಡಲು 2 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ದುರಸ್ತಿ ಕಾರ್ಯವು ಕೂಡ ನಡೆಯುತ್ತಿದೆ. ಹೊಸ ಕಟ್ಟಡ ಅವಶ್ಯಕತೆ ಇರುವ ಕಡೆ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷ ನಂದೀಶ್, ಜಿಲ್ಲಾ ಕಾರ್ಯದರ್ಶಿ ಶಿವು, ಜಿಲ್ಲಾ ಸಂಚಾಲಕರಾದ ಬಸವರಾಜು, ಚಂದ್ರು, ಸೋಮು, ಮಹೇಶ್, ಅಂದಾನಿ, ಮಾದೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net