

ಆನೇಕಲ್: ಖಾಸಗಿ ಶಿಕ್ಷಣ ಸಂಸ್ಥೆಗಳು ಒಗ್ಗಟ್ಟಿನಿಂದ ಇರಬೇಕು. ಯಾವುದೇ ಕಾರಣಕ್ಕೂ ಒಡಕು ಮೂಡಬಾರದು ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಕಿವಿಮಾತು ಹೇಳಿದರು.
ತಾಲೂಕಿನ ಹೆಬ್ಬಗೋಡಿಯಲ್ಲಿ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆ್ ಪ್ರೈವೇಟ್ ಸ್ಕೂಲ್ ಇನ್ ಆನೇಕಲ್ ಸಂಸ್ಥೆಯ ತಾಲೂಕು ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ ಒಂದು ಸಂಸ್ಥೆ ಕೆಲಸ ಮಾಡುತ್ತಿದೆ. ಸಣ್ಣಪುಟ್ಟ ವಿಚಾರದಲ್ಲಿ 2 ಸಂಘಟನೆಗಳು ಆಗುವುದು ಬೇಡ. ಎಲ್ಲರೂ ಒಗ್ಗೂಡಿ ಇರಬೇಕು. ಎಲ್ಲರೂ ಸೇರಿ ದೀಪ ಹಚ್ಚಿದಾಗ ಅದರ ಶಕ್ತಿ ಹೆಚ್ಚಾಗುತ್ತದೆ. ಎಂಥ ಸನ್ನಿವೇಶ ಬಂದರೂ ಎಲ್ಲರೂ ಒಗ್ಗಟ್ಟಿನಿಂದ ಮುಂದೆಕ್ಕೆ ಹೋಗಬೇಕು ಎಂದರು.
ಸಂಸ್ಥೆ ಕಟ್ಟುವುದು ತುಂಬಾ ಕಷ್ಟ. ಕೆಡುವುವುದು ಸುಲಭ. ಶಾಲೆ ಮಾಡಿದ್ದಾರೆ ಎಂದರೆ ಅಧಿಕಾರಿಗಳು ನಮ್ಮನ್ನು ಕಳ್ಳರಂತೆ ನೋಡುತ್ತಾರೆ. ಇಂಥ ವ್ಯವಸ್ಥೆಯನ್ನು ನಾವೆಲ್ಲರೂ ಮೆಟ್ಟಿ ನಿಲ್ಲಬೇಕಿದೆ ಎಂದರು.
ಆರ್‌ಟಿಐ ಹಣದ ಬಿಡುಗಡೆಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೂ ನಮ್ಮ ಪ್ರಯತ್ನ ಸಲವಾಗಿಲ್ಲ. ಆದರೆ ಸಂಘಗಳು ಒಡೆದರೆ ಇನ್ನಷ್ಟು ಸಂಕಷ್ಟಗಳು ಎದುರಾಗುತ್ತವೆ ಎಂದು ಹೇಳಿದರು.
ಕ್ಯಾಮ್ಸ್ ರಾಜ್ಯ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡಿ, ವ್ಯಕ್ತಿಗಳ ಪ್ರತಿಷ್ಠೆಗಾಗಿ ಸಂಘಗಳು ಪ್ರಾರಂಭ ಆಗಬಾರದು. ಕರೊನಾ ಸಂದರ್ಭದಲ್ಲಿ ಅತಿಹೆಚ್ಚು ಸಂಕಷ್ಟ ಅನುಭವಿಸಿದ್ದು ಖಾಸಗಿ ಶಾಲೆಗಳು. ಕ್ಯಾಮ್ಸ್ ನಿರಂತರ ಹೋರಾಟದಿಂದ ಶಿಕ್ಷಕರ ಸಮಸ್ಯೆ ಬಗೆಹರಿಯುತ್ತಿವೆ. ಒಂದು ಸಂಘ ಇದ್ದಾಗ ಶಕ್ತಿ ಹೆಚ್ಚಾಗಿರುತ್ತದೆ. ಹತ್ತಾರು ಸಂಘಗಳು ಹುಟ್ಟಿಕೊಳ್ಳುವುದು ಬೇಡ ಎಂದು ಹೇಳಿದರು.
ಖ್ಯಾತ ಬರಹಾಗಾರ ಡಾ. ಪುತ್ತುರಾಯ ಮಾತನಾಡಿ, ನಾವು ಜೀವನದಲ್ಲಿ ಉತ್ತಮ ಹೆಜ್ಜೆ ಇಡುವತ್ತ ಕೆಲಸ ಮಾಡಬೇಕು ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ, ಕ್ಯಾಮ್ಸ್ ಸಂಚಾಲಕ ಚಾ.ಹ. ರಮೇಶ್, ಎಎಂಎಸ್‌ಎ ಸಂಸ್ಥೆಯ ಅದ್ಯಕ್ಷ ರವಿಕುಮಾರ್, ಗೌರವಾಧ್ಯಕ್ಷ ಚಂದ್ರಯ್ಯ ನಾಯ್ಡು, ಮುಖಂಡರಾದ ವಿನಯ್, ಪ್ರಹಲ್ಲಾದ್ ಗೌಡ, ಶ್ರೀನಿವಾಸ್ ಮತ್ತಿತರರು ಇದ್ದರು.
ಸಿಡಿ ವಿಚಾರ ಮಾತನಾಡುವುದಿಲ್ಲ: ಮನೆಯಲ್ಲಿ ಟಿವಿ ನೋಡುವ ಮಕ್ಕಳು ಇರುತ್ತಾರೆ. ಇಂಥ ವಿಚಾರಗಳನ್ನು ಅವರು ನೋಡಿದರೆ, ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಚಿಂತಿಸುವಂತೆ ಮಾಡುತ್ತದೆ. ಆದ್ದರಿಂದ, ಸಿಡಿ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಚರ್ಚೆಯನ್ನೂ ಮಾಡುವುದಿಲ್ಲ ಎಂದು ಪುಟ್ಟಣ್ಣ ಸ್ಪಷ್ಟಪಡಿಸಿದರು.
ನೂತನ ಪದಾದಿಕಾರಿಗಳು: ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆ್ ಪ್ರೈವೇಟ್ ಸ್ಕೂಲ್ ಇನ್ ಆನೇಕಲ್ ಸಂಸ್ಥೆ ತಾಲೂಕು ಘಟಕದ
ಗೌರವಾಧ್ಯಕ್ಷರಾಗಿ ಚಂದ್ರಯ್ಯ ನಾಯ್ಡು, ತೇ.ನಾ. ಅಂಬರೀಶ್, ಜಿ.ಎನ್. ಸುರೇಶ್, ಕಾರ್ಯಾಧ್ಯಕ್ಷರಾಗಿ ಪ್ರಹ್ಲಾದ್ ಗೌಡ, ವಿನಯ್, ಅಧ್ಯಕ್ಷರಾಗಿ ಎನ್. ರವಿಕುಮಾರ್, ಉಪಾಧ್ಯಕ್ಷರಾಗಿ ಕಾಳಿನಾಥ್, ಕೃಷ್ಣಪ್ಪ, ಪಳ್ಳಳ್ಳಪ್ಪ ಯಾದವ್, ಪ್ರಧಾನ ಕಾರ್ಯದರ್ಶಿಗಳಾಗಿ ಅನಂತರಾಜು, ಶ್ರೀನಿವಾಸ್, ಲೋಕೇಶ್, ವಿಜಯಕುಮಾರ್, ರಂಗರಾಜು, ಯೊಗೇಶ್ ಆಯ್ಕೆಯಾದರು.