

ಹಾಸನ: ಶಿಕ್ಷಣ ಇಲಾಖೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನಾವಶ್ಯಕವಾಗಿ ನೀಡುತ್ತಿರುವ ತೊಂದರೆಯನ್ನು ಖಂಡಿಸಿ ಆ.15ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಜಿ.ಇ.ಶಿವರಾಮೇಗೌಡ ಅವರು ತಿಳಿಸಿದರು.
ಹೊಸ ಶಿಕ್ಷಣ ಸಂಸ್ಥೆಗಳು ಯಾವ ನಿಯಮಗಳನ್ನು ಪಾಲಿಸಬೇಕೋ ಅದೇ ನಿಯಮವನ್ನು ಯಥಾವತ್ತಾಗಿ ಹಳೇ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ನ್ಯಾಯಾಲಯದ ಆದೇಶವಿದ್ದರೂ ಹೊಸ ನಿಯಮದ ಹೆಸರಿನಲ್ಲಿ ಹಿಂಸೆ ನೀಡಲಾಗಿತ್ತಿದೆ. ಈ ಬಗ್ಗೆ ಶಾಸಕರು ವಿಧಾನಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರೂ ಸರ್ಕಾರ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ. ಆದ್ದರಿಂದ 2018ರ ಮೊದಲು ಸ್ಥಾಪನೆಗೊಂಡ ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಕ್ಕಳ ಭವಿಷ್ಯದ ಜೊತೆಗೆ ಶಿಕ್ಷಣ ಸಂಸ್ಥೆಗಳ ಅಳಿವು-ಉಳಿವು ನೋಡಿಕೊಳ್ಳಬೇಕಾದ ಸವಾಲು ನಮ್ಮ ಮುಂದೆ ಇರುವುದರಿಂದ ಸರ್ಕಾರ ನಮ್ಮ ನೆರವಿಗೆ ಬರುವ ಅಗತ್ಯವಿದೆ. ಸರ್ಕಾರಿ ಶಾಲೆಗಳಿಗೆ ವಿಧಿಸದ ನಿಯಮಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಏಕೆ ಹೇರಬೇಕು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರು ಮಕ್ಕಳಲ್ಲವೇ ಎಂದು ಪ್ರಶ್ನಿಸಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವಾತಂತ್ರ್ಯ ಹರಣ ಮಾಡುವ ಜೊತೆಗೆ ಅವೈಜ್ಞಾನಿಕ ನಿಯಮಗಳು ಜಾರಿ ಮಾಡಲಾಗುತ್ತಿದೆ. ಖಾಸಗಿ ಶಾಲೆ ವಿದ್ಯಾರ್ಥಿಗಳನ್ನು ಮಲತಾಯಿ ಮಕ್ಕಳಂತೆ ನೋಡುವುದನ್ನು ನಿಲ್ಲಿಸಬೇಕು ಎಂದರು ಹೇಳಿದರು.
ಸರ್ಕಾರದ ಅವೈಜ್ಞಾನಿಕ ನಿಯಮಗಳ ವಿರುದ್ಧ ಪ್ರತಿಭಟನಾ ಸಂಕೇತವಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಕೈಗೆ ಕಪ್ಪು ಬಟ್ಟೆ ಧರಿಸುವ ಮೂಲಕ ಕರಾಳ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ನಿರ್ಧರಿಸಿದ್ದೇವೆ. ರಾಜ್ಯ ಸರ್ಕಾರ ಮಾನ್ಯತೆ ನವೀಕರಣ, ಭೂ ಪರಿರ್ವನೆ, ಶಾಲಾ ಕಟ್ಟಡ ತೆರಿಗೆ, ಆರ್.ಟಿ.ಇ ಪಾವತಿ ವಿಳಂಬ, ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಬಿ.ಕೆ.ಗಂಗಾಧರ್, ನಿರ್ದೇಶಕರಾದ ಹೆಚ್.ಡಿ.ಕುಮಾರ್, ಹೇಮಾಂತ್ ಹಾಜರಿದ್ದರು.