

ಚಿತ್ರದುರ್ಗ: ಕಳೆದ 3 ವರ್ಷಗಳಿಂದ ಜಿಲ್ಲೆಯ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮ ಗಾಳಿಗೆ ತೂರಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ನೂರಾರು ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಿಯಮ ಪಾಲಿಸುತ್ತಿಲ್ಲವೆಂದು ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಧಿಕ್ಕಾರ ಕೂಗಿದರು. ಹೆಚ್ಚು ಶುಲ್ಕ ವಿಧಿಸಿ ಪಾಲಕರ ಮೇಲೆ ಆರ್ಥಿಕ ಶೋಷಣೆಗೆ ಮುಂದಾಗಿವೆ. ಇದರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಡಿಡಿಪಿಐ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ರವಾನಿಸಿದರು.
ಬಹಳಷ್ಟು ಖಾಸಗಿ ಶಾಲೆಗಳು ನಿಯಮಬಾಹಿರವಾಗಿ ಯೂನಿಫಾರಂ, ಶೂ, ಸಾಕ್ಸ್, ಟೈ, ಪುಸ್ತಕಗಳು, ವಾಹನ ಸೌಲಭ್ಯ ಸೇರಿ ‘ಸ್ವ’ಹಿತ, ದುರ್ಲಾಭದ ದುರುದ್ದೇಶದಿಂದ ಶುಲ್ಕ ಪಡೆದು ಪಾಲಕರ ಆರ್ಥಿಕ ಹೊರೆ ಹೆಚ್ಚಿಸುತ್ತಿದ್ದು, ಕೂಡಲೇ ಅಂತಹ ಶಾಲೆಗಳ ಪರವಾನಿಗೆ ರದ್ದುಗೊಳಿಸಬೇಕು. ಈಗಾಗಲೇ ದುಬಾರಿ ಶುಲ್ಕ ಪಡೆದ ಎಲ್ಲ ವಿದ್ಯಾಸಂಸ್ಥೆಗಳು ಪಾಲಕರಿಗೆ ಕ್ಷಮೆಯಾಚಿಸಿ, ಅನಧಿಕೃತ ಶುಲ್ಕ ಹಿಂಪಾವತಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದೆಲ್ಲ ಸರ್ಕಾರಿ ಶಾಲಾ-ಕಾಲೇಜುಗಳನ್ನು ಖಾಸಗಿಯವರಂತೆ ಉನ್ನತೀಕರಿಸಬೇಕು. ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಸಂಖ್ಯೆ ದ್ವಿಗುಣಗೊಳಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಕುಸಿತ ಸಂಬಂಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಎಸ್ಸೆಸ್ಸೆಲ್ಸಿವರೆಗೂ ವಾರಕ್ಕೆ ಎರಡು ಅವಧಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ನೈತಿಕತೆ ಬಲಗೊಳಿಸುವ ನೀತಿಪಾಠ ಬೋಧನೆ ಕಡ್ಡಾಯವಾಗಬೇಕು. ರಾಜ್ಯದೆಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಾನುಸಾರ 6*8 ಅಡಿ ಎತ್ತರದ ಪ್ಲೆಕ್ಸ್‌ನಲ್ಲಿ ಶುಲ್ಕದ ಮಾಹಿತಿಯ ವಿವರವನ್ನು ಪ್ರತಿ ಮಾರ್ಚ್ ತಿಂಗಳೊಳಗೆ ಶಾಲೆಗಳ ಮುಂದೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ವೇಳೆ ಶಾಲೆಗಳು ಆರಂಭವಾಗುವ ಕಾರಣ ಶಾಲಾ ಶುಲ್ಕವನ್ನು ನಾಲ್ಕು ಸಮಕಂತುಗಳಲ್ಲಿ ಶೈಕ್ಷಣಿಕ ವರ್ಷದಲ್ಲಿ ಪಡೆಯಬೇಕು. ಕೆಲ ಶಾಲೆಗಳಲ್ಲಿ ಶಿಕ್ಷಕರಿಗೆ ನಿಗದಿತ ವೇತನ ನೀಡುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದ್ದು, ಇದನ್ನು ಸರಿಪಡಿಸಬೇಕು. ಬೋಧನೆ ಬಿಟ್ಟು ಹಣಗಳಿಕೆ ದಂಧೆಯಲ್ಲಿ ತೊಡಗಿರುವ ಶಿಕ್ಷಕರನ್ನು 50 ಕಿ.ಮೀ ದೂರದ ಶಾಲೆಗೆ ವರ್ಗಾಹಿಸಬೇಕು ಎಂದು ಕೋರಿದರು.
ಮುಖಂಡರಾದ ಈಚಘಟ್ಟ ಸಿದ್ಧವೀರಪ್ಪ, ರೆಡ್ಡಿಹಳ್ಳಿ ವೀರಣ್ಣ, ತಿಪ್ಪೇಸ್ವಾಮಿ, ಜೆ.ಸತೀಶ್, ಕೆ.ಸಿ.ಮಹೇಶ್, ಎಂ.ಎನ್.ಚನ್ನಕೇಶವ, ಆರ್.ಬಸವರಾಜ್, ರಂಗಸ್ವಾಮಿ, ಆರ್.ರಘು, ಆರ್.ಕೆ.ಗೌಡ, ಗೋವಿಂದಪ್ಪ, ಶಂಕರಪ್ಪ, ಜಿ.ವಿ.ರಾಜಣ್ಣ, ಮಂಜುನಾಥ್, ಹಯಾತ್‌ಸಾಬ್, ಕಲೀಮ್ ಇತರರಿದ್ದರು.