ಖಾಸಗಿ ಶಾಲೆಗೆ ಬಿಇಒ ನೋಟಿಸ್, ಶುಲ್ಕ ಪಾವತಿಸದಿದ್ದಕ್ಕೆ ತರಗತಿಗೆ ಬಹಿಷ್ಕಾರ ಪ್ರಕರಣ

Bio shchool visit
Published on

ದೊಡ್ಡಬಳ್ಳಾಪುರ: ಶಾಲಾ ಶುಲ್ಕ ಪಾವತಿಸಲಿಲ್ಲ ಎಂಬ ಕಾರಣಕ್ಕೆ ಕೆಲವೊಂದು ವಿದ್ಯಾರ್ಥಿಗಳನ್ನು ತರಗತಿ ಹೊರಗೆ ಕೂರಿಸಿದ್ದ ನಗರದ ಜ್ಞಾನಗಂಗಾ ಶಾಲಾ ಆಡಳಿತ ಮಂಡಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶುಭಮಂಗಳಾ ನೋಟಿಸ್ ಜಾರಿ ಮಾಡಿದ್ದಾರೆ.

ಶುಲ್ಕ ವಸೂಲಿಗೆ ಆಡಳಿತ ಮಂಡಳಿ ಅನುಸರಿಸಿದ ಅರ್ಥಹೀನ ನಡೆಗೆ ಬೇಸರ ವ್ಯಕ್ತಪಡಿಸಿರುವ ಬಿಇಒ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ಶಾಲೆಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

ಶುಲ್ಕಕ್ಕಾಗಿ ಪಾಲಕರಿಗೆ ಒತ್ತಡ ಹೇರಬಾರದು, ಮಕ್ಕಳನ್ನು ಹೊರಗೆ ಕೂರಿಸಬಾರದು. ಸರ್ಕಾರ ಎಷ್ಟು ಶುಲ್ಕ ನಿಗದಿ ಮಾಡಿದೆಯೋ ಅಷ್ಟನ್ನೇ ತೆಗೆದುಕೊಳ್ಳಬೇಕು, ಇದರ ಹೊರತಾಗಿ ಅನ್ಯಮಾರ್ಗ ಅನುಸರಿಸುವುದು ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಆನ್‌ಲೈನ್ ಹಾಗೂ ಆ್ಲೈನ್ ತರಗತಿ ಶಾಲಾ ಕೊಠಡಿಯಿಂದ ಹೊರಗೆ ಕೂರಿಸಬಾರದು. ತಾಲೂಕಿನಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಇಒ ತಿಳಿಸಿದ್ದಾರೆ.

ಏನಿದು ಪ್ರಕರಣ: ಕರೊನಾ ಕಾರಣದಿಂದ 2 ವರ್ಷದಿಂದ ಕೆಲವು ಪಾಲಕರು ಮಕ್ಕಳ ಶಾಲಾ ಶುಲ್ಕ ಕಟ್ಟಿರಲಿಲ್ಲ. ಇದರಿಂದ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಹೊರಗೆ ಕೂರಿಸಿ ಒತ್ತಡ ಹೇರುವ ತಂತ್ರ ಅನುಸರಿಸಿತ್ತು. ಮಕ್ಕಳು ಶಾಲೆ ಹೊರಗಡೆ ಕುಳಿತಿರುವ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ಬಿಇಒ ಶಾಲೆಗೆ ನೋಟಿಸ್ ಜಾರಿ ಮಾಡಿದ್ದಾರೆ.

ಶಾಲೆ ಸಮರ್ಥನೆ: ಎರಡು ವರ್ಷದಿಂದ ಅನೇಕ ಪಾಲಕರು ಶಾಲೆ ಕಡೆ ಸುಳಿದಿಲ್ಲ, ಕರೆ ಮಾಡಿದರೂ ಸ್ಪಂದಿಸಿಲ್ಲ, ಈಗ ಶಾಲೆ ಪುನರಾರಂಭಗೊಂಡರೂ ಪಾಲಕರು ಶುಲ್ಕ ಪಾವತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರದ ನಿಯಮದಂತೆ ಶೇ.70 ಶುಲ್ಕ ಪಡೆಯಲಾಗುತ್ತಿದೆ. ಕೆಲವು ಪಾಲಕರಿಂದ ಎಷ್ಟು ಹಣ ಕಟ್ಟಲು ಸಾಧ್ಯವೋ ಅಷ್ಟು ಮಾತ್ರ ಕಟ್ಟಿಸಿಕೊಳ್ಳಲು ಹೇಳಲಾಗಿದೆ. ಆದರೂ ಕೆಲವರು ಸ್ಪಂದಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ಪಾಲಕರ ಗಮನ ಸೆಳೆಯಲು ಈ ರೀತಿ ಮಾಡಲಾಗಿದೆ, ಶುಲ್ಕ ಕಟ್ಟದಿದ್ದರೆ ಶಾಲೆ ನಡೆಸುವುದಾದರೂ ಹೇಗೆ ಎಂದು ಶಾಲಾ ಆಡಳಿತ ಮಂಡಳಿ ಸಮರ್ಥನೆ ಮಾಡಿಕೊಂಡಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net