ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿ

Dharani
Published on

ಬೀದರ್: 1995ರಿಂದ ಈಚೆಗೆ ಪ್ರಾರಂಭಿಸಿದ ಎಲ್ಲ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕ ನಗರದಲ್ಲಿ ಶನಿವಾರ ಧರಣಿ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರಮುಖರು, ಸರ್ಕಾರಿ ಹಾಗೂ ಅನುದಾನಿತ ಶಾಲೆ ವಿದ್ಯಾರ್ಥಿಗಳಿಗೆ ಒದಗಿಸುವ ಎಲ್ಲ ಸೌಲಭ್ಯಗಳನ್ನು ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ಸರ್ಕಾರದಿಂದ ಅನುಮತಿ ಪಡೆದು 1ರಿಂದ 5ರವರೆಗೆ ತರಗತಿ ನಡೆಸುತ್ತಿರುವ ಶಾಲೆಗಳಿಗೆ 6ರಿಂದ 8ರವರೆಗೆ ಅನುಮತಿ ಕೊಡಬೇಕು. ಮಹಾಮಾರಿ ಕರೊನಾದಿಂದ 6 ತಿಂಗಳಿಂದ ಸಂಬಳ ಇಲ್ಲದೆ ಕಷ್ಟದಲ್ಲಿರುವ ಶಿಕ್ಷಕರು ಹಾಗೂ ನೌಕರರಿಗೆ ತಲಾ 25 ಸಾವಿರ ಧನಸಹಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ 371(ಜೆ) ಅಡಿ ಸಹಾಯಧನ ಕಲ್ಪಿಸಲು ಕಾರ್ಯನೀತಿ ರೂಪಿಸಬೇಕು. 2019-20ರ ಆರ್ಟಿಇ ಅನುದಾನ ಬಿಡುಗಡೆ ಮಾಡಬೇಕು. 10 ವರ್ಷಗಳಿಂದ ನಡೆದಿರುವ ಶಾಲೆಗಳಿಗೆ ಶಾಶ್ವತ ಮಾನ್ಯತೆ ಕೊಡಬೇಕು. ಸಾಲದ ಮೇಲೆ ಖರೀದಿಸಿದ ಶಾಲಾ ವಾಹನಗಳ ಮರು ಪಾವತಿಯನ್ನು ಶಾಲೆ ಪ್ರಾರಂಭ ಆಗುವವರೆಗೆ ಮುಂದೂಡಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಪತ್ರವನ್ನು ಡಿಸಿ ರಾಮಚಂದ್ರನ್ ಮೂಲಕ ಸಿಎಂಗೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ಬಸವರಾಜ ಭರಶೆಟ್ಟಿ, ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಪ್ರಮುಖರಾದ ರಾಜೇಂದ್ರ ಮಣಗೀರೆ, ಸಂದೀಪ ಶೆಟಕಾರ, ಬಾಬುರಾವ ಗೊಂಡ, ಗುರುನಾಥ ರೆಡ್ಡಿ ಚಿಂತಾಕಿ, ಸುರೇಶ ಪಾಟೀಲ್, ಬಸವರಾಜ ಶೆಟಕಾರ, ಸಲೀಂ ಪಾಶಾ, ಶಾಮಣ್ಣ ಬಾವಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net