ಖಾಸಗಿ ಶಾಲೆ ಮಾನ್ಯತೆ ನವೀಕರಣ ಹೆಸರಲ್ಲಿ ಕಿರುಕುಳ

ಖಾಸಗಿ ಶಾಲೆ ಮಾನ್ಯತೆ ನವೀಕರಣ ಹೆಸರಲ್ಲಿ ಕಿರುಕುಳ
Published on

ಹಾಸನ: ಪ್ರತಿವರ್ಷವೂ ಖಾಸಗಿ ಶಾಲೆಗಳ ಕಟ್ಟಡ ಸುರಕ್ಷತೆ, ಅಗ್ನಿ ನಿರೋಧಕ ಸುರಕ್ಷತೆ ಪ್ರಮಾಣಪತ್ರ ಪಡೆಯುವಂತೆ ಸರ್ಕಾರ ಒತ್ತಡ ಹೇರುವ ಮೂಲಕ ಮಾನ್ಯತೆ ನವೀಕರಣ ಮತ್ತು ಉನ್ನತೀಕರಣಕ್ಕೆ ಅಡ್ಡಿಯುಂಟು ಮಾಡಲಾಗುತ್ತಿದೆ ಎಂದು ಅವರ್ ಸ್ಕೂಲ್ಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅರಸ್ ಆರೋಪಿದರು.

ಖಾಸಗಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮತ್ತು ಸರ್ಕಾರದ ಆರ್ಥಿಕ ಹೊರೆ ಕಡಿಮೆ ಮಾಡುವಲ್ಲಿ ಪೂರಕವಾಗಿ ಕೆಲಸ ಮಾಡುತ್ತಿವೆ. ಆದ್ದರಿಂದ ಕಟ್ಟಡ ಸುರಕ್ಷತೆ, ಅಗ್ನಿ ನಿರೋಧಕ ಸುರಕ್ಷತೆ ಪ್ರಮಾಣಪತ್ರ ಕಡ್ಡಾಯಗೊಳಿಸಿರುವುದರಿಂದ ವಿನಾಯಿತಿ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಪ್ರತಿ ಹಂತದಲ್ಲೂ ಸರ್ಕಾರ ತೆಗೆದುಕೊಳ್ಳುವ ನಿಲುವುಗಳು, ಜಾರಿಗೆ ತರುವ ಕಾನೂನುಗಳು ಶಾಲಾ ಆಡಳಿತ ಮಂಡಳಿಯನ್ನು ಸಂಕಷ್ಟಕ್ಕೆ ತಳ್ಳುವಂತಿವೆ. ಆ ನಿಲುವುಗಳೆಲ್ಲವೂ ದ್ವಂದ್ವದಿಂದ ಕೂಡಿವೆ. ಸರ್ಕಾರ ನಡೆಸುವ ಶಾಲೆಗಳಿಗೆ ಒಂದು ರೀತಿ, ನಾವು ನಡೆಸುವ ಶಾಲೆಗಳಿಗೆ ಒಂದು ರೀತಿ ಇರುತ್ತವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇಲ್ಲ ಸಲ್ಲದ ಕೊಂಕು ತೆಗೆಯುತ್ತಾರೆ. ರಾಜ್ಯ ಪಠ್ಯಕ್ರಮದ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ನಿಯಮ ಹೇರಿ, ಅವುಗಳ ಅಸ್ತಿತ್ವಕ್ಕೆ ನಿರಂತರವಾಗಿ ಕೊಡಲಿ ಪೆಟ್ಟು ನೀಡುವ ಪ್ರಯತ್ನ ಮಾಡಲಾಗುತ್ತಿದ್ದು, ಇದು ನಿಲ್ಲಬೇಕಿದೆ ಎಂದು ಕೋರಿದರು.

ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಬಗ್ಗೆ ಸಮಾನ ದೃಷ್ಟಿಕೋನ ಹೊಂದಿರಬೇಕು. ಅಲ್ಲದೆ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ನೀತಿ ನಿಯಮ ರೂಪಿಸುವುದರಲ್ಲಿ ಮತ್ತು ಅದರ ಅನುಷ್ಠಾನದಲ್ಲಿ ತಾರತಮ್ಯ ಧೋರಣೆ ಅನುಸರಿಸಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ವಿಜಯ ಕುಮಾರ್, ಬೇಲೂರಿನ ಜಯಣ್ಣಗೌಡ, ಸುಜಲಾ ಕಾಲೇಜಿನ ಲೋಕೇಶ್, ಅರಸೀಕೆರೆಯ ಮುಖೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net