ಖಾಸಗಿ ಲೇವಾದೇವಿಯವರ ಆಮಿಷಕ್ಕೆ ಒಳಗಾಗದಿರಿ

05 yelandur 01
Published on
  • ಯಳಂದೂರು: ಖಾಸಗಿ ಲೇವಾದೇವಿ ಸಂಸ್ಥೆಯವರ ಆಮಿಷಕ್ಕೆ ಯಾರೂ ಒಳಗಾಗಬಾರದು. ಇದರಿಂದ ಇನ್ನಷ್ಟು ಅರ್ಥಿಕ ಮುಗ್ಗಟ್ಟು ಅನುಭವಿಸಿ ಅನೇಕ ಸಂಸಾರಗಳು ಬೀದಿ ಪಾಲಾಗಲಿವೆ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸಂತೇಮರಳ್ಳಿಯ ಎಪಿಎಂಸಿ ಆವರಣದಲ್ಲಿ ಸೋಮವಾರ ವಲಯ ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಾಲ ಪಡೆದವರಿಗೆ ಕಡಿಮೆ ಬಡ್ಡಿಯ ಸಾಲ ಲಭಿಸುವ ಜತೆಗೆ ಇದನ್ನು ಸುಲಭ ಕಂತುಗಳ ಮೂಲಕ ಪಾವತಿ ಮಾಡಲು ಅವಕಾಶವಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ರಾಜ್ಯದಲ್ಲಿ ಮಹಿಳಾ ಪ್ರಗತಿಗೆ ಹೊಸ ಭಾಷ್ಯವನ್ನು ಬರೆದಿದ್ದು ಇಡೀ ದೇಶವೇ ನಮ್ಮತ್ತ ತಿರುಗಿ ನೋಡುವಂತಾಗಿದೆ. ಇಂತಹ ಸಾಧನೆ ಮಾಡುವುದು ಸರ್ಕಾರದಿಂದಲೂ ಇದುವರೆಗೂ ಸಾಧ್ಯವಾಗಿಲ್ಲ. ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಪ್ರಗತಿಪರ ಮಹಿಳಾ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಲಾಗಿದೆ ಎಂದರು.
    ಸಂತೇಮರಹಳ್ಳಿ ವಲಯದಲ್ಲಿ ಕಳೆದ 10 ವರ್ಷಗಳಿಂದ 338 ಕ್ರಿಯಾಶೀಲ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು 2,748 ಕ್ಕೂ ಹೆಚ್ಚು ಕುಟುಂಬಗಳಿಗೆ ಇದರಿಂದ ಅನುಕೂಲವಾಗಿದೆ. ರಾಜ್ಯಾದ್ಯಂತ ಲಕ್ಷಾಂತರ ಕುಟುಂಬಗಳು ಮಹಿಳೆಯರಿಂದಲೇ ನಿರ್ವಹಿಸುತ್ತಿರುವುದಕ್ಕೆ ಧರ್ಮಸ್ಥಳ ಸಂಸ್ಥೆಯೇ ಕಾರಣವಾಗಿದೆ. ಇಂತಹ ಒಂದು ಆರ್ಥಿಕ ಸಬಲೀಕರಣದ ಕ್ರಾಂತಿಯನ್ನು ಹುಟ್ಟುಹಾಕಿ ಇದನ್ನು ಯಶಸ್ವಿಯಾಗಿಸಲು ಸಂಸ್ಥೆಯ ಶ್ರಮ ಹಾಗೂ ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯೇ ಪ್ರಮುಖ ಕಾರಣ ಎಂದರು.
    ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ ಅವರು ನೂತನ ಪದಾಧಿಕಾರಿಗಳಿಗೆ ದಾಖಲಾತಿ ಹಸ್ತಾಂತರಿಸಿದರು. ಒಕ್ಕೂಟದ ನಿಕಟ ಪೂರ್ವ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಲಾಯಿತು.
    ಸಂಸ್ಥೆಯ ಯೋಜನಾಧಿಕಾರಿ ಎಂ.ಎಸ್. ಪ್ರವೀಣ್, ಗ್ರಾಪಂ ಅಧ್ಯಕ್ಷ ಶಂಕರಪ್ಪ, ಎನ್ರಿಚ್ ಮಹದೇವ್‌ಸ್ವಾಮಿ, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಉಪ ನಿರೀಕ್ಷಕ ತಾಜುದ್ದೀನ್, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಮೇಲ್ವಿಚಾರಕ ಧನಪಾಲ್, ಪ್ರವೀಣ್, ಲಕ್ಷ್ಮೀದೇವಿ, ಶ್ರೀನಿವಾಸ್, ಸೇವಾ ಪ್ರತಿನಿಧಿಗಳು, ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net