

ಮೈಸೂರು: ಖಾಸಗಿ ಬ್ಯಾಂಕ್‌ವೊಂದರ ಹೆಸರಿನಲ್ಲಿ ನಕಲಿ ಟ್ರೇಡಿಂಗ್ ಜಾಲ ರೂಪಿಸಿ, ನಗರದ ವ್ಯಕ್ತಿಯೊಬ್ಬರಿಗೆ ಸುಮಾರು 26 ಲಕ್ಷ ರೂ. ವಂಚಿಸಲಾಗಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವೇಶ್ವರನಗರದ 42 ವರ್ಷದ ವ್ಯಕ್ತಿ, ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್ ಸಂಬಂಧಿತ ಜಾಹೀರಾತು ನೋಡಿದ್ದಾರೆ. ಆಕ್ಸಿಸ್ ಸೆಕ್ಯೂರಿಟೀಸ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಕಾಣಿಸಿದ ಲಿಂಕ್ ಕ್ಲಿಕ್ ಮಾಡಿದ್ದಾರೆ.
ಕೂಡಲೇ ಅವರ ಮೊಬೈಲ್ ನಂಬರ್ ವ್ಯಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆಯಾಗಿದೆ. ಆ ಗ್ರೂಪ್‌ನಲ್ಲಿ ಬ್ಲಾಕ್ ಇನ್ವೆಸ್ಟ್‌ಮೆಂಟ್ ಐಪಿಒ ಮಾಡುವ ಬಗ್ಗೆ ಮಾಹಿತಿ ನೀಡಿ, ವೆಬ್‌ಸೈಟ್‌ನಲ್ಲಿ ಅಕೌಂಟ್ ಸೃಜಿಸುವಂತೆ ಸೂಚಿಸಲಾಗಿದೆ.
ಹೂಡಿಕೆಗೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿದ ಈ ವ್ಯಕ್ತಿ, ತಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದಾರೆ.
ನಂತರ ಹಂತ ಹಂತವಾಗಿ 25.95 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಈ ವ್ಯವಹಾರದ ಬಗ್ಗೆ ಅನುಮಾನ ಬಂದಿದ್ದರಿಂದ ಆಕ್ಸಿಸ್ ಬ್ಯಾಂಕ್‌ಗೆ ಕರೆ ಮಾಡಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ.