ಖಾಸಗಿ ಚಿಕಿತ್ಸೆ ಪಡೆದರೆ ಸೌಲಭ್ಯವಿಲ್ಲ ;  ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ

DSC_6143
Published on

ತುಮಕೂರು : ಕರೊನಾ ಪೋರ್ಟಲ್‌ನಲ್ಲಿ ನೋಂದಣಿಯಾಗದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವವರಿಗೆ ಸರ್ಕಾರದ ಸೌಲಭ್ಯ ನೀಡುವುದು ಕಷ್ಟವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಂಕು ದೃಢವಾದರೆ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಯ ಬಗ್ಗೆ ಚಿಂತಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಸೌಲಭ್ಯವಿದೆ. ಆದರೂ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ 8 ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆವರೇನಾದರೂ ಮೃತಪಟ್ಟರೆ ಸರ್ಕಾರದಿಂದ ಪರಿಹಾರ ಲಭ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಪ್ರಸ್ತುತ 9505 ಕರೊನಾ ಸಕ್ರಿಯ ಪ್ರಕರಣಗಳಿದ್ದು, ಬಹುತೇಕ ಸೋಂಕಿತರು ಮನೆಯಲ್ಲಿಯೇ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರಿಗೆ ಆಸ್ಪತ್ರೆಯ ಅಗತ್ಯ ಕಾಣಿಸದಿರುವುದು ಒತ್ತಡವನ್ನು ಕಡಿಮೆಮಾಡಿದೆ ಎಂದರು.

ಇವರ ಆರೋಗ್ಯ ವಿಚಾರಣೆಗಾಗಿ ತೆರೆದಿರುವ ತಾಲೂಕುವಾರು ಕೋವಿಡ್ ವಾರ್ ರೂಂ ಸಿಬ್ಬಂದಿ ಸೋಂಕಿತರಿಗೆ ದೂರವಾಣಿ ಕರೆ ಮೂಲಕ ಆರೋಗ್ಯ ಸ್ಥಿತಿ, ಗತಿಯನ್ನು ವಿಚಾರಿಸಲು ಸೂಚಿಸಲಾಗಿದೆ. ಸೋಂಕಿತರ ಸಂಪರ್ಕಿತರ ಹೊರತಾಗಿ ಸರ್ಕಾರದ ಆದೇಶದಂತೆ ಜನರಲ್ಲಿ ಕರೊನಾ ಲಕ್ಷಣಗಳು ಕಂಡುಬಂದಲ್ಲಿ ಮಾತ್ರ ಪರೀಕ್ಷೆ ಮಾಡಿಸಲು ಸೂಚಿಸಬೇಕು. ಗುಣಲಕ್ಷಣಗಳಿಗೆ ಅನುಗುಣವಾಗಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಆಸ್ಪತ್ರೆಗಳಲ್ಲಿ ಔಷಧ ಕೊರತೆ ಕಂಡುಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಐಸಿಯು, ಕೊಠಡಿಗಳ ದುರಸ್ತಿ ಕಾರ್ಯಗಳಿದ್ದಲ್ಲಿ ಶೀಘ್ರವೇ ಪೂರ್ಣಗೊಳಿಸಿ ಬಳಕೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜನಜಾಗೃತಿ ಯಾತ್ರೆಗೆ ಚಾಲನೆ : ಭಾರತ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಆರಂಭಿಸಲಾದ ಕರೊನಾ ಹರಡುವಿಕೆ ಮತ್ತು ತಡೆಗಟ್ಟುವಿಕೆ ಕುರಿತು ಜನಜಾಗೃತಿ ರಥ ಯಾತ್ರೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು. ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಾಲನೆ ಪಡೆದ ಜನಜಾಗೃತಿ ಜಾಥಾ ಜ.29ರ ವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಆಯ್ದ 30 ಹಳ್ಳಿಗಳಲ್ಲಿ ಸಂಚರಿಸಿ ಅರಿವು ಮೂಡಿಸಲಿದೆ. ಸಂಗೀತ ಮತ್ತು ನಾಟಕ ಕಲಾತಂಡಗಳಿಂದ ಜಾಗೃತಿ ಗೀತೆ, ನಾಟಕ, ಮ್ಯಾಜಿಕ್ ಶೋಗಳ ಮೂಲಕ ಕೋವಿಡ್-19 ಮತ್ತು ಒಮಿಕ್ರಾನ್ ಹರಡುವಿಕೆ ಮತ್ತು ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಿದೆ. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕ ಜಿ.ಡಿ.ಹಳ್ಳಿಕೇರಿ ಹಾಗೂ ಎಸ್.ರಾಮಕೃಷ್ಣ ಇದ್ದರು.

ಜಿಲ್ಲಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ, ಸೋಂಕಿತ ಮಕ್ಕಳು ಒಂದೇ ತರಗತಿಯವರಾಗಿದ್ದಲ್ಲಿ ಆ ತರಗತಿಗಷ್ಟೇ ರಜೆ ಘೋಷಿಸಬೇಕು. ಶಾಲೆಯಲ್ಲಿ ಇಪ್ಪತ್ತಕ್ಕಿಂತ ಹೆಚ್ಚಿನ ಮಕ್ಕಳು ಸೋಂಕಿತರಾಗಿದ್ದಲ್ಲಿ ಇಡೀ ಶಾಲೆಗೆ ರಜೆ ಘೋಷಿಸಬೇಕು. ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net