ಖಾಸಗಿ ಆಸ್ಪತ್ರೆಗಳು ಸೇವೆ ನೀಡುವುದು ಕಡ್ಡಾಯ

7 vikram 11
Published on

ಧಾರವಾಡ: ಕೋವಿಡ್ ಚಿಕಿತ್ಸೆಗೆ ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳು, ಕಿಮ್್ಸ ಹಾಗೂ ಬೆರಳೆಣಿಕೆಯಷ್ಟು ಖಾಸಗಿ ಆಸ್ಪತ್ರೆಗಳು ಶ್ರಮಿಸುತ್ತಿವೆ. ಕರೊನಾ ವಿರುದ್ಧದ ಈ ಸಮರದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಭಯ ತೊರೆದು ಜನರ ಆರೋಗ್ಯಕ್ಕಾಗಿ ಸೇನಾನಿಗಳಾಗಿ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಚಿಕಿತ್ಸೆಗೆ ಹಿಂದೇಟು ಹಾಕಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ವೈದ್ಯರ ಭಾಗವಹಿಸುವಿಕೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅನೇಕ ಬಾರಿ ಸಭೆ ಕರೆದು ಮನವಿ ಮಾಡಿಕೊಳ್ಳಲಾಗಿದೆ. ಖಾಸಗಿ ವೈದ್ಯರು ತಮ್ಮಲ್ಲಿರುವ ಅನಗತ್ಯ ಭಯ ತೊರೆದು ಸ್ವಯಂ ಪ್ರೇರಣೆಯಿಂದ ಕರೊನಾ ಸೇನಾನಿಗಳಾಗಬೇಕು ಎಂದರು.

ದಿನೇದಿನೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳ ಸೇವೆ ಪಡೆಯುವುದು ಅನಿವಾರ್ಯ. ಕರೊನಾ ನಿಯಂತ್ರಣಕ್ಕೆ ರಚಿಸಿರುವ ವಿವಿಧ ತಂಡಗಳ ಅಧಿಕಾರಿಗಳು ಬರುವ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ತಕ್ಷಣ ತಮ್ಮ ಗಮನಕ್ಕೆ ತರಬೇಕು. ಇದರ ಜತೆಗೆ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಬೀಜ, ರಸಗೊಬ್ಬರ ಕೊರತೆಯಾಗದಂತೆ ಸಹ ಅಗತ್ಯ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 611 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 30 ಜನ ಅನ್ಯ ಜಿಲ್ಲೆಯವರಿದ್ದಾರೆ. 12 ಜನ ಮರಣ ಹೊಂದಿದ್ದಾರೆ. ಜಿಲ್ಲೆಯ ಡಿಮ್ಹಾನ್ಸ್ ಪ್ರಯೋಗಾಲಯದಲ್ಲಿ 31807, ಕಿಮ್್ಸ 19596, ಖಾಸಗಿ ಎನ್​ಎಂಆರ್ ಪ್ರಯೋಗಾಲಯದಲ್ಲಿ 63 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪ್ರಸ್ತುತ ಕಿಮ್ಸ್​ನಲ್ಲಿ 188, ಎಸ್​ಡಿಎಂನಲ್ಲಿ 13, ಕೋವಿಡ್ ಕೇರ್ ಸೆಂಟರ್​ನಲ್ಲಿ 138 ಸೆರಿ ಒಟ್ಟು 339 ಸಕ್ರೀಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 91 ಕೋವಿಡ್ ಕೇರ್ ಸೆಂಟರ್​ಗಳಲ್ಲಿ 8970 ಹಾಸಿಗೆಗಳ ಸಾಮರ್ಥ್ಯ ಗುರುತಿಸಲಾಗಿದೆ. ಎಲ್ಲ 17 ಖಾಸಗಿ ಆಸ್ಪತ್ರೆಗಳಲ್ಲಿ ಅವುಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಹಂತಹಂತವಾಗಿ ಪಡೆಯಲಾಗುವುದು ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಅರವಿಂದ ಬೆಲ್ಲದ, ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ್, ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ, ಕಿಮ್್ಸ, ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಕಾರ್ಯಪಡೆಯ ವಿವಿಧ 14 ತಂಡಗಳ ಅಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net