

ಪಾವಗಡ: ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ನಾರ್ಮಲ್ ಡೆಲಿವರಿ ಆದರೂ ಸರಿ, ಸಿಜರಿಯನ್ ಆದರೂ ಕನಿಷ್ಠ 30&-50 ಸಾವಿರ ಬಿಲ್ ಹಾಕಿ ತಾಲೂಕಿನ ಬಡ ಜನರ ರಕ್ತ ಹೀರುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಕಿರಣ್ ಅವರಿಗೆ ಶಾಸಕ ಎಚ್.ವಿ.ವೆಂಕಟೇಶ್ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೆಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಜನರು ಪಟ್ಟಣದ ಖಾಸಗಿ ಆಸ್ಪತ್ರೆಗಳಿಗೆ ವಿವಿಧ ರೋಗಿಗಳು ಚಿಕಿತ್ಸೆಗೆ ದಿನನಿತ್ಯ ಬರುತ್ತಾರೆ. ನೆಗಡಿ, ಕೆಮ್ಮುಗೆ ಇಲ್ಲಾಸಲ್ಲದ ರಕ್ತ ಪರೀಕ್ಷೆಗಳು ಮಾಡಿ ಬಡ ಜನರ ರಕ್ತ ಹೀರುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ತಮ್ಮ ಸೂಚನಾ ಫಲಕದಲ್ಲಿ ತಪಾಸಣೆ ಹಾಗೂ ಇನ್ನಿತರ ಪರೀಕ್ಷೆಗಳ ದರ ಪಟ್ಟಿ ಕಡ್ಡಾಯವಾಗಿ ಹಾಕಬೇಕು. ನಿಮ್ಮ ಕೈಲಿ ಸಾಧ್ಯವಾಗದಿದ್ದಲ್ಲಿ ನಾನೇ ಖುದ್ದು ಮುಂದಿನ ದಿನಗಳಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳ ಜತೆ ಪರಿಶೀಲಿಸುತ್ತೇನೆ. ಇದಕ್ಕೂ ಮುನ್ನ ನೀವು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಸಬ್ ರಿಜಿಸ್ಟ್ರಾರ್ ಇಲಾಖೆಯ ಭಾಗ್ಯಮ್ಮ ಅವರಿಂದ ಮಾಹಿತಿ ಪಡೆದುಕೊಂಡು ರೈತರ ಜಮೀನು ಸೋಲಾರ್ಗೆ, ಖಾಸಗಿ ವ್ಯಕ್ತಿಗಳಿಗೆ ಬೇಕಾಬಿಟ್ಟಿ ದುಡ್ಡಿನ ಆಸೆಗೆ ಬಿದ್ದು, ನೀವು ರಿಜಿಸ್ಟ್ರಾರ್ ಮಾಡಿಕೊಡುತ್ತೀದಿರಾ, ಇದಕ್ಕೆ ಸಂಬಂಧಿಸಿದಂತೆ ರೈತರಿಂದ ಅನೇಕ ದೂರುಗಳು ಬಂದಿವೆ. ಇವೆಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು ತಾಲೂಕಿನ ರೈತರಿಗೆ
ಅನುಕೂಲವಾಗುವಂತೆ ಕೆಲಸ ಮಾಡಿ ಎಂದರು.
ಬೆಸ್ಕಾಂ ರೈತರ ಟಿ.ಸಿ ಸುಟ್ಟರೆ ಲಕ್ಷಾಂತರ ರೂಪಾಯಿ ರೈತರಿಂದ ಪಡೆದು, ಸಾಗಿಸುವ ವೆಚ್ಚವನ್ನು ಸಹ ರೈತರ ತಲೆಗೆ ಹಾಕಿ ಹಗಲು ದರೊಡೆ ನಡೆಸುತ್ತಿದೆ. ಟಿ.ಸಿ.ಸುಟ್ಟರೆ ರೈತರು ಹಾಕಿದ ಬೆಳೆ ಉಳಿಸಿಕೊಳ್ಳಲು ಆಗದೇ ನಷ್ಟವಾಗಿ ನಿಮಗೂ ಲಕ್ಷಾಂತರ ಹಣ ನೀಡಿದರೆ ರೈತರು ಉಳಿಯುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿ. ಇಲಾಖೆಯ ಅಧಿಕಾರಿಗಳನ್ನು ಹತೋಟಿಯಲ್ಲಿಟ್ಟು ರೈತರ ಕೆಲಸ ಸುಗಮವಾಗಿಮಾಡಿಕೊಡಬೇಕೆಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ವಿದ್ಯಾರ್ಥಿ ನಿಲಯಗಳ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು ವಸತಿ ನಿಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಪಿಡಬ್ಲ್ಯುಡಿಂಇಇ ಅನಿಲ್, ಜಿಪಂ ಇಇ ಸುರೇಶ್, ಅಬಕಾರಿ ನಿರೀಕ್ಷಕರು ಮೈಕಲ್ ಜಾರ್ಜ್, ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ, ಆರೋಗ್ಯಾಧಿಕಾರಿ ಡಾ.ಕಿರಣ್, ಕೃಷಿ ಸಹಾಯಕ ನಿರ್ದೇಶಕ ಅಜಯ್, ಸಾರಿಗೆ ವ್ಯವಸ್ಥಾಪಕ ಹನುಮಂತರಾಯಪ್ಪ, ಯೋಜನಾಧಿಕಾರಿ ಮಲ್ಲಿಕಾರ್ಜುನ್, ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ್, ಎಸ್ ಟಿ ಅಧಿಕಾರಿ ಯಮುನಾ, ಸಿಡಿಪಿಒ ಸುನಿತಾ, ಲೇಬರ್ಇನ್ಸ್ಪೆಕ್ಟರ್ ಅಬ್ದುಲ್ ರಹೂಫ್ ಇದ್ದರು.