ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಸಂಗ್ರಹಣೆಗೆ ಜಿಲ್ಲಾಧಿಕಾರಿ ಸೂಚನೆ

deepa cholan
Published on

ಧಾರವಾಡ: ಲಾಕ್​ಡೌನ್ ಸಂದರ್ಭದಲ್ಲಿ ತೀವ್ರ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ ಮತ್ತು ಜ್ವರಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವೈದ್ಯಕೀಯ ಸಲಹೆ ಪಡೆದವರ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತಂಡಗಳನ್ನು ರಚಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಪಡೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾದ 1750 ಆಸ್ಪತ್ರೆ ಮತ್ತು ಕ್ಲಿನಿಕ್​ಗಳಿವೆ. ಅವುಗಳಲ್ಲಿ ಸುಮಾರು 1500 ರಷ್ಟು ಕಾರ್ಯ ನಿರ್ವಹಿಸುತ್ತಿವೆ ಎಂಬ ಮಾಹಿತಿ ಇದೆ. ಲಾಕ್​ಡೌನ್ ಸಂದರ್ಭದಲ್ಲಿ ಈ ಖಾಸಗಿ ಆಸ್ಪತ್ರೆಗಳಲ್ಲಿ 10 ದಿನಗಳ ಅವಧಿಯಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಸಂಗ್ರಹಿಸಬೇಕು. ವೈದ್ಯರು ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದ್ದರೆ ಆ ಕುರಿತ ವಿವರಗಳನ್ನೂ ಸಂಗ್ರಹಿಸಬೇಕು ಎಂದರು.

ಜಿಲ್ಲೆಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಕ್ಷಯ, ಕುಷ್ಠರೋಗ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ದುರ್ಬಲ ಗುಂಪಿನ ಸುಮಾರು 1,06,000 ಜನರಿದ್ದಾರೆ. ಅವರೆಲ್ಲರನ್ನೂ ಆಶಾ ಕಾರ್ಯಕರ್ತೆಯರು ಖುದ್ದಾಗಿ ಭೇಟಿ ಮಾಡಿ ಅಗತ್ಯ ಔಷಧ, ಸಲಹೆ ದೊರೆತಿದೆಯೇ ಎಂಬುದರ ಸಮೀಕ್ಷೆ ನಡೆಸಬೇಕು. ಕಾರ್ಯಕರ್ತೆಯರಿಗೆ ಈ ಕುರಿತು ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ನೀಡಬೇಕು. ಸಮೀಕ್ಷೆ ಮಾಹಿತಿ ಸಂಗ್ರಹಣೆಗೆ ಸಮರ್ಪಕ ನಮೂನೆ ಸಿದ್ಧಪಡಿಸಬೇಕು ಎಂದರು.

ಔಷಧ ವ್ಯಾಪಾರಿಗಳ ಕರ್ತವ್ಯಪ್ರಜ್ಞೆಗೆ ಶ್ಲಾಘನೆ: ಕರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್​ಡೌನ್ ಜಾರಿಯಲ್ಲಿರುವ ಸಮಯದಲ್ಲಿ ಔಷಧ ವ್ಯಾಪಾರಿಗಳು ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಅತ್ಯಗತ್ಯ ಔಷಧಗಳನ್ನು ನಿರಂತರವಾಗಿ ಪೂರೈಸುತ್ತ ಕರ್ತವ್ಯಪ್ರಜ್ಞೆ ಮೆರೆಯುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. ಕೋವಿಡ್-19 ನಿಯಂತ್ರಿಸಲು ರಾಜ್ಯ ಸರ್ಕಾರ ಸಾಂಕ್ರಾಮಿಕ ರೋಗ ತಡೆಗಟ್ಟುವ ಕಾಯ್ದೆ 1897 ಹಾಗೂ ಕೋವಿಡ್ -19 ನಿಯಂತ್ರಣ ಕಾಯ್ದೆ 2020ರಡಿ ಹಲವಾರು ಕ್ರಮ ಕೈಗೊಂಡಿದೆ. ರಾಜ್ಯಮಟ್ಟದ ತಾಂತ್ರಿಕ ಪರಿಣತರ ಸಮಿತಿಯು ನೀಡಿದ ಅಭಿಪ್ರಾಯ ಆಧರಿಸಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಗಳು ಇರುವವರನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ಕಾಯ್ದೆಯ ಸೆಕ್ಷನ್ 12ರ ಪ್ರಕಾರ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಹಾಗೂ ಆಸ್ಪತ್ರೆಗಳಲ್ಲಿರುವ ಔಷಧಾಲಯಗಳು ಎಲ್ಲ ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಸಂಗ್ರಹಿಸಬೇಕು. ಔಷಧಗಳನ್ನು ಜ್ವರ, ಶೀತ ಹಾಗೂ ನೆಗಡಿ ಎಂದು ವಿಭಾಗ ಮಾಡಲಾಗಿದೆ. ಪ್ಯಾರಾಸಿಟಾಮೊಲ್, ಸಿಟ್ರಿಜಿನ್, ಕ್ಲೋರೊಫಿನೈರ್​ವೆುೖನ್, ಕೆಮ್ಮಿನ ಔಷಧ ಖರೀದಿಸುವವರ ದಾಖಲೆಗಳನ್ನು ಇಡಬೇಕು. ಔಷಧ ವ್ಯಾಪಾರಿಗಳು ಈ ಕುರಿತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಪ್ರತಿದಿನ adcddar.dcd-ka@nic.in ಮೇಲ್​ಗೆ ಕಳುಹಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲ ಔಷಧ ವ್ಯಾಪಾರಿಗಳು ಔಷಧ ನಿಯಂತ್ರಣ ನಿಯಮ ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು. ಜ್ವರ ಮತ್ತು ಕೆಮ್ಮು ಇರುವವರಿಗೆ ವೈದ್ಯರ ಸಲಹೆ ಮೇರೆಗೆ ಔಷಧ ವಿತರಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಡಿ. ಫಾರ್ವ, ಬಿ. ಫಾರ್ವ ಪದವಿ ಪಡೆದ ಅರ್ಹರು ಫಾರ್ಮಸಿ ಅಂಗಡಿಗಳನ್ನು ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಬೇಕು ಎಂದು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1025 ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ನವಜಾತ ಶಿಶುಗಳಿಗೆ ಮತ್ತು ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಾದ ಲಸಿಕೆ, ಚುಚ್ಚುಮದ್ದುಗಳನ್ನು ಪ್ರತಿ ಗುರುವಾರ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ ಆಧರಿಸಿ ಲಸಿಕೆಗಳನ್ನು ನೀಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಡಾ. ಶಶಿ ಪಾಟೀಲ, ಡಾ. ಸಂಪತ್, ಸಹಾಯಕ ಔಷಧ ನಿಯಂತ್ರಕ ಅಜಯ ಮುದಗಲ್ ಕೃಷ್ಣಪ್ಪ, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರ ಭೂಸನೂರ, ಕಾರ್ಯದರ್ಶಿ ವಿರೂಪಾಕ್ಷ ಕೊಪ್ಪರಶೆಟ್ಟರ, ಡಾ. ಎಸ್.ಆರ್. ರಾಮನಗೌಡರ, ಮಲ್ಲಿಕಾರ್ಜುನ ಮೆಣಸಿನಕಾಯಿ, ಸಂಜಯ ಭಾವಿಕಟ್ಟಿ, ವಿಜಯಕುಮಾರ ಕಿಲ್ಲೇದ, ಅರುಣ ಬೆಟಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net