ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತಯಾರಿ

deepa cholan
Published on

ಧಾರವಾಡ: ಕೋವಿಡ್-19 ವೈರಾಣು ಬಾಧಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಗತ್ಯವಿದ್ದಲ್ಲಿ ಬಳಸಲು ಅನುಕೂಲವಾಗುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆ ಹಾಗೂ ಇತರ ಸೌಲಭ್ಯಗಳನ್ನು ಕರೊನಾ ಬಾಧಿತರ ಚಿಕಿತ್ಸೆಗೆ ಮೀಸಲಿಡಲು ಸರ್ಕಾರ ಆದೇಶಿಸಿದೆ. ಆಸ್ಪತ್ರೆಗಳು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ, ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

ಗುರುವಾರ ಏರ್ಪಡಿಸಿದ್ದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳ ವೈದ್ಯರ ಮತ್ತು ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಜಿಲ್ಲೆಯ 22 ಖಾಸಗಿ ಆಸ್ಪತ್ರೆಗಳನ್ನು ಕರೊನಾ ಚಿಕಿತ್ಸೆಗೆ ಆಯ್ಕೆ ಮಾಡಿ, ಚಿಕಿತ್ಸೆಗೆ ದರ ನಿಗದಿಗೊಳಿಸಿದೆ. ಆದರೆ, ಗುರುವಾರ ಪರಿಷ್ಕರಣೆ ಮಾಡಿ ಆಯ್ಕೆಯಾಗಿರುವ ಆಸ್ಪತ್ರೆಗಳಲ್ಲಿ ಕಣ್ಣು ಹಾಗೂ ದಂತ ಆಸ್ಪತ್ರೆಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಜಿಲ್ಲಾಡಳಿತ ಕರೊನಾ ಚಿಕಿತ್ಸೆಗೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್​ಗಳಿಗೆ ಆದ್ಯತೆ ನೀಡಿ, ಅಲ್ಲಿಯೇ ಅಗತ್ಯ ಚಿಕಿತ್ಸೆ ನೀಡಲಿದೆ. ಆದರೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದಲ್ಲಿ ಮತ್ತು ಅಗತ್ಯವೆನಿಸಿದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಿದೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯ ಹಾಸಿಗೆ, ವೆಂಟಿಲೇಟರ್, ಆರೋಗ್ಯ ಸಿಬ್ಬಂದಿ ಸೇರಿ ಮೂಲ ಸೌಕರ್ಯಗಳಲ್ಲಿ ಶೇ. 50ರಷ್ಟು ಸೌಲಭ್ಯಗಳನ್ನು ಜಿಲ್ಲಾಡಳಿತ ಶಿಫಾರಸು ಮಾಡುವ ಸೋಂಕಿತರಿಗೆ ಬಳಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ನೇರವಾಗಿ ಆಸ್ಪತ್ರೆಗೆ ಬಿಡುಗಡೆ ಮಾಡಲಿದೆ. ರೋಗಿಗಳಿಂದ ಶುಲ್ಕ, ವೆಚ್ಚ ವಸೂಲು ಮಾಡುವಂತಿಲ್ಲ. ನಿಗದಿತ ದರಗಳಿಗಿಂತ ಹೆಚ್ಚು ಹಣ ವಸೂಲು ಮಾಡುವಂತಿಲ್ಲ ಎಂದು ನಿರ್ದೇಶಿಸಿದರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ ವಿಮೆ ಅಳವಡಿಸಲು ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಖಾಸಗಿ ಆಸ್ಪತ್ರೆ ವೈದ್ಯರು ವಿನಂತಿಸಿದರು.

ಡಿಎಚ್​ಒ ಡಾ.ಯಶವಂತ ಮದೀನಕರ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಸರ್ವೆಕ್ಷಣಾ ಅಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಕವನ್ ದೇಶಪಾಂಡೆ, ನವನಗರ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು, ಮುಖ್ಯಸ್ಥರು, ಪ್ರತಿನಿಧಿಗಳು ಭಾಗವಹಿಸಿದ್ದರು.

ಕೋವಿಡ್ ತಪಾಸಣೆ ಹೆಚ್ಚಿಸಿ

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ತಪಾಸಣೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾದ್ಯಂತ ಪ್ರಸ್ತುತ 57 ಸಕ್ರಿಯ ಕಂಟೇನ್ಮೆಂಟ್ ಪ್ರದೇಶಗಳಿವೆ. ಆ ಪ್ರದೇಶಗಳ ಎಲ್ಲ ನಿವಾಸಿಗಳ ಆರೋಗ್ಯವನ್ನು ನಿರಂತರವಾಗಿ ತಪಾಸಣೆಗೆ ಒಳಪಡಿಸಬೇಕು. ಎಲ್ಲ ಆಶಾ ಕಾರ್ಯಕರ್ತರಿಗೆ ಪಲ್ಸ್, ಆಕ್ಸಿಮೀಟರ್ ಪೂರೈಸಬೇಕು. ಸ್ಯಾನಿಟೈಸರ್, ಥರ್ಮಲ್ ಸ್ಕಾ್ಯನಿಂಗ್ ಮೂಲಕ ನಿವಾಸಿಗಳ ಸಾಮಾನ್ಯ ಆರೋಗ್ಯ ಮಟ್ಟವನ್ನು ದಾಖಲಿಸಿ ಅಗತ್ಯ ಇರುವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು. ಎಲ್ಲ ಸಕ್ರಿಯ ಪ್ರಕರಣಗಳ ಪ್ರಾಥಮಿಕ ಸಂಪರ್ಕ ಹೊಂದಿದವರು ಮತ್ತು ಕೊಳಚೆ ಪ್ರದೇಶದ ನಿವಾಸಿಗಳು, ಬೀದಿ ಬದಿ ವ್ಯಾಪಾರಸ್ಥರ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್​ಗಳಲ್ಲಿ ಕೆಲಸ ಮಾಡುವವರನ್ನು ರ್ಯಾಂಡಮ್ ಆಗಿ ಆಯ್ಕೆ ಮಾಡಿ ಕೋವಿಡ್ ತಪಾಸಣೆ ಮಾಡಬೇಕು. ಗ್ರಾಮೀಣ ಭಾಗದಲ್ಲಿಯೂ ಪರೀಕ್ಷೆಗಳ ಪ್ರಮಾಣ ಹೆಚ್ಚಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net