ಖಾಸಗಿ ಆಸ್ಪತ್ರೆ ವೈದ್ಯೆ ವಿರುದ್ಧ ಪ್ರತಿಭಟನೆ

Protest against private hospital doctor
ಇಂಡಿ ಪಟ್ಟಣದ ಖಾಸಗಿ ಆಸ್ಪತ್ರೆ ಎದುರು ಹೋರಾಟ ನಡೆಸಿದ ಪ್ರತಿಭಟನಾಕಾರರು ಪಿಎಸ್‌ಐ ಸೋಮೇಶ ಗೆಜ್ಜಿ ಅವರಿಗೆ ಮನವಿ ಸಲ್ಲಿಸಿದರು.
Published on

ಇಂಡಿ: ಹೆರಿಗೆ ಮಾಡಿಸಿಕೊಳ್ಳುವುದಾಗಿ ಹೇಳಿ ದಿನವಿಡಿ ಕಾಯುವಂತೆ ಮಾಡಿ ನಸುಕಿನ ಜಾವ ವಿಜಯಪುರಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿ ವೈದ್ಯೆ ವಿರುದ್ಧ ಕುಟುಂಬಸ್ಥರು ಹಾಗೂ ನಾಗರಿಕರು ಖಾಸಗಿ ಆಸ್ಪತ್ರೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಹಾರ್ಪೇಟ್ ಗಲ್ಲಿಯ ನಿವಾಸಿ ಕವಿತಾ ಧರ್ಮಣ್ಣ ದಶವಂತ ಅವರು ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಗಜಾಕೋಶ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಮೈಯಲ್ಲಿ ಜ್ವರ ಇರುವ ಕಾರಣ ಈಗ ಸಲೈನ್ ಹಚ್ಚಿಸಿ ಸಂಜೆ ಹೆರಿಗೆ ಮಾಡಿಕೊಳ್ಳುವುದಾಗಿ ವೈದ್ಯೆ ಭಾರತಿ ಗಜಾಕೋಶ ತಿಳಿಸಿದ್ದರು. ಅವರ ಮಾತಿನಂತೆ ಗರ್ಭಿಣಿ ಸಾಯಂಕಾಲದವರೆಗೂ ಕಾದಿದ್ದಾರೆ. ತದನಂತರ ಸರಳ ಹೆರಿಗೆ ಆಗಲ್ಲ, ಸಿಜೇರಿಯನ್ ಮಾಡಬೇಕಾಗುತ್ತದೆ ಎಂದು ವೈದ್ಯೆ ತಿಳಿಸಿದ್ದಾರೆ. ಅದಕ್ಕೂ ಗರ್ಭಿಣಿ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ. ತಡರಾತ್ರಿಯಾದರೂ ಹೆರಿಗೆ ಮಾಡಿಕೊಳ್ಳಲು ವೈದ್ಯೆ ಬಾರದೆ ರಾತ್ರಿ 2ಕ್ಕೆ ನಮ್ಮಲ್ಲಿ ಹೆರಿಗೆ ಮಾಡಿಕೊಳ್ಳಲು ಸಾಧ್ಯವಾಗಲ್ಲ. ಕೂಡಲೇ ವಿಜಯಪುರ ಅಥವಾ ಸೋಲ್ಲಾಪುರಕ್ಕೆ ಹೋಗಿ ಎಂದು ತಿಳಿಸಿ ಆಂಬುಲೆನ್ಸ್ ವ್ಯವಸ್ಥೆ ಸಹ ಮಾಡದೆ ತಮ್ಮ ಮನೆಗೆ ಹೋಗಿದ್ದಾರೆ. ರಾತ್ರಿ ಸಮಯದಲ್ಲಿ ವಾಹನ ತರಿಸಿಕೊಂಡು ವಿಜಯಪುರದ ಸಾಸನೂರ ಆಸ್ಪತ್ರೆಗೆ ದಾಖಲಾದಾಗ ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿದ್ದು ತಿಳಿದು ಬಂದಿದೆ. ವೈದ್ಯರು ಮಗುವನ್ನು ಹೊರತೆಗೆದು ಕವಿತಾಳ ಪ್ರಾಣ ಉಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಸಂಬಂಧಿಕರು ಹಾಗೂ ನಾಗರಿಕರು ಸೇರಿ ಇಂಡಿಯ ಖಾಸಗಿ ಆಸ್ಪತ್ರೆ ವೈದ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲಹೊತ್ತು ಆಸ್ಪತ್ರೆಯ ಮುಂದಿನ ರಸ್ತೆ ತಡೆದು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ನಾಗಯ್ಯ ಹಿರೇಮಠ, ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಗ್ರಾಮೀಣ ಪಿಎಸ್‌ಐ ಸೋಮೇಶ ಗೆಜ್ಜಿ, ಹೊರ್ತಿ ಪಿಎಸ್‌ಐ ಸೀತಾರಾಮ ಲಮಾಣಿ ಭೇಟಿ ನೀಡಿ ರಸ್ತೆಯಲ್ಲಿನ ಜನರನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದರು.

ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳಲು ಕುಟುಂಬದವರು ಪಟ್ಟು ಹಿಡಿದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.
ಪ್ರತಿಭಟನೆಯಲ್ಲಿ ಅಮರೇಶ ದಶವಂತ, ಸಂಜೀವ ದಶವಂತ, ನಾಗರಾಜ ದಶವಂತ, ಶಿವು ಬಗಲಿ, ಸುನೀಲಗೌಡ ಬಿರಾದಾರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net