ಖಾಲಿ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ; ಡಾ.ಅಜಯಸಿಂಗ್​

PH 11
Published on

ಜೇವರ್ಗಿ: ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಕ್ಷರ ಆವಿಷ್ಕಾರ ಕಾರ್ಯಕ್ರಮ ಪೂರಕವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಡಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ. ಅಜಯಸಿಂಗ್ ಹೇಳಿದರು.

ಭೂತಪುರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೇವರ್ಗಿ ಮತ್ತು ಯಡ್ರಾಮಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಸೇವೆಯಲ್ಲಿ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ 19 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಕೂಡಲೇ ಶಿಕ್ಷಕರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಯಡ್ರಾಮಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಇಒ ಮದರಖಾನ್ ಪಠಾಣ್ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಎಸ್.ಟಿ.ಬಿರಾದಾರ, ಪ್ರಸನ್ನ ಮೋಘೇಕರ್, ಅಬ್ದುಲ್ ನಬೀ, ರಾಜೇಸಾಹೇಬ್ ನದಾಫ್, ಗುಡುಲಾಲ್ ಶೇಖ್, ಮರೆಪ್ಪ ಹೊಸಮನಿ, ಬಸವರಾಜ ತೇಲ್ಕರ್, ರುದ್ರಪ್ಪ ಚಟ್ನಳ್ಳಿ, ಕಾಸಯ್ಯ ಗುತ್ತೇದಾರ, ಶ್ರೀಮಂತ ಕುಂಬಾರ, ಶಂಬಣ್ಣ ಹೂಗಾರ, ಅಮೃತ ಮಾಲಿಪಾಟೀಲ್, ಬಸವರಾಜ ಕುಂಬಾರ ಇತರರಿದ್ದರು.

ಜೇವರ್ಗಿಯಲ್ಲಿ ಗುರುಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಿದ್ದು, ಉಳಿದ 1 ಕೋಟಿ ರೂ. ಅನುದಾನ ನೀಡುವುದಕ್ಕಾಗಿ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗುವುದು. ಕಾಲಮಿತಿಯೊಳಗೆ ಗುರುಭವನ ಕಾಮಗಾರಿ ಪೂರ್ಣಗೊಳಿಸಲಾಗುವುದು.
| ಡಾ.ಅಜಯಸಿಂಗ್, ಕೆಕೆಆರ್‌ಡಿಬಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net