

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿಯಿರುವ, ತೆರೆದ ಸ್ಥಳಗಳಿಂದ/ಖಾಲಿ ನಿವೇಶನಗಳಿಂದ ತ್ಯಾಜ್ಯ ವಿಲೇವಾರಿಗಾಗಿ ಮಾಲೀಕರಿಂದ ಆಸ್ತಿ ತೆರಿಗೆಯ ಭಾಗವಾಗಿ ದಂಡ ಮತ್ತು ವಿಲೇಗೆ ತಗುಲಿದ ವೆಚ್ಚ ಸಂಗ್ರಹಿಸುವ ಕುರಿತು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016 ಮತ್ತು ಬಿಬಿಎಂಪಿ ಕಾಯಿದೆ 2020ರ ಅಡಿಯಲ್ಲಿ ಹೊಸ ಆದೇಶವನ್ನು ಹೊರಡಿಸಲಾಗಿದೆ.
ಹೊಸ ಆದೇಶ ಅನ್ವಯ ವಲಯ ಕಚೇರಿ ಮಟ್ಟದ ಅಧಿಕಾರಿಗಳು ಎಲ್ಲ ಖಾಲಿ ಸೈಟ್ /್ಲ್ಯಾಟ್, ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ಸುರಿದು ಅನಾರೋಗ್ಯಕರ ವಾತಾವರಣ ಸೃಷ್ಟಿಸುವುದು, ಮರ, ಗಿಡಗಂಟಿಗಳಿಂದ ಆರೋಗ್ಯಕ್ಕೆ ಹಾನಿಕರ ಉಂಟು ಮಾಡುವುದು, ಸಾರ್ವಜನಿಕ ಸ್ಥಳ ಸಹಿತ ನೆರೆಹೊರೆಯವರಿಗೆ ತೊಂದರೆ ಉಂಟುಮಾಡುವ ಸ್ಥಳಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ. ಇವುಗಳಲ್ಲಿ ನಿರ್ದಿಷ್ಟ ನಿಯಮಗಳ ಉಲ್ಲಂಘನೆಗಾಗಿ ಘನತ್ಯಾಜ್ಯ ನಿರ್ವಹಣಾ ಬೈ-ಲಾ ಶ್ಯೆಡೂಲ್ಗೆ ಅನುಗುಣವಾಗಿ ದಂಡವನ್ನು ವಿಧಿಸುವಂತೆ ಸೂಚಿಸಲಾಗಿದೆ.
ತೆರವಿಗೆ 7 ದಿನ ಸಮಯ ನಿಗದಿ:
ಖಾಲಿ ನಿವೇಶನದಲ್ಲಿನ ತ್ಯಾಜ್ಯವನ್ನು ತೆಗೆದುಹಾಕಲು ಅಥವಾ ತೆರವುಗೊಳಿಸಲು 7 ದಿನಗಳ ಅವಧಿ ಒಳಗೊಂಡ ಸೂಚನೆ ನೀಡಲಾಗುತ್ತದೆ.
ವ್ಯಕ್ತಿ/ಮಾಲೀಕರು ನಿರ್ದೇಶನ ಪಾಲಿಸಲು ವಿಫಲರಾದಲ್ಲಿ ನಂತರ ಪಾಲಿಕೆಯಿಂದ ಸ್ಥಳವನ್ನು ತೆರವುಗೊಳಿಸಲು ಕ್ರಮವನ್ನು ಕೈಗೊಳ್ಳಲಾಗುತ್ತದೆ. ದಂಡ ಮತ್ತು ವೆಚ್ಚವನ್ನು ಆಸ್ತಿ ತೆರಿಗೆಯ ಪುಸ್ತಕಗಳಲ್ಲಿ ನಮೂದಿಸಿ ತೆರಿಗೆಯ ರಶೀದಿಯಲ್ಲಿ ಪ್ರತ್ಯೇಕ ಕೋಷ್ಠಕದಲ್ಲಿ ಉಲ್ಲೇಖಿಸಿ ಆಸ್ತಿ ತೆರಿಗೆ ಸಂಗ್ರಹಣೆಯೊಂದಿಗೆ ಬಾಕಿಯಾಗಿ ಸಂಗ್ರಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ದಂಡ ಪಾವತಿಸಲು ವಿಫಲವಾದಲ್ಲಿ ವಲಯ ಆಯುಕ್ತರು ಸೂಕ್ತ ಅನ್ವಯಿತ ಬಡ್ಡಿಯನ್ನು ವಿಧಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.