ಖಾಲಿ ಸಿಲಿಂಡರ್ ಹೊತ್ತು ಪ್ರತಿಭಟನೆ

20 smg 4
Published on

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರಂತರವಾಗಿ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಸೇರಿ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಖಾಲಿ ಸಿಲಿಂಡರ್​ನ್ನು ತಲೆ ಮೇಲೆ ಹೊತ್ತು ವಿನೂತನವಾಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಆಡಳಿತ ಯಂತ್ರದ ಜತೆಗೆ ಆರ್ಥಿಕತೆಯೂ ಕುಸಿದಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರವಿದ್ದಾಗ 400 ರೂ. ಇದ್ದ ಸಿಲಿಂಡರ್ ದರ ಇಂದು 900 ರೂ.ಗೆ ಏರಿಕೆಯಾಗಿದೆ. 45 ರೂ. ಇದ್ದ ಪೆಟ್ರೋಲ್ 80 ರೂ. ಹಾಗೂ 40 ರೂ. ಇದ್ದ ಡಿಸೇಲ್ 70ಕ್ಕೆ ಏರಿಕೆಯಾಗಿದೆ. ರೈಲು ಪ್ರಯಾಣ ದರ ಶೇ.20 ಏರಿಕೆ ಆಗಿದೆ. ರೈಲು, ಭಾರತ್ ಪೆಟ್ರೊಲಿಯಂ, ಬಿಎಸ್​ಎನ್​ಎಲ್, ಎಲ್​ಐಸಿ ಸೇರಿ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನೆರೆಹಾವಳಿಗೆ ಹೆಚ್ಚುವರಿ ಅನುದಾನ ತರುವಲ್ಲಿಯೂ ಬಿಜೆಪಿ ಸರ್ಕಾರ ವಿಫಲವಾಗಿದೆ. ಬೆಳೆ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಘೊಷಣೆ ಮಾಡದೇ ಸುಸ್ತಿ ಬಡ್ಡಿ ಮನ್ನಾ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ಇದೊಂದು ಬೋಗಸ್ ತಂತ್ರವಾಗಿದೆ. ಸಿಎಎ, ಎನ್​ಆರ್​ಸಿ, ಎನ್​ಪಿಆರ್ ವಿರೋಧಿಸಿ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಜಾಣಕುರುಡರಂತೆ ವರ್ತಿಸುತ್ತಿವೆ ಎಂದು ಜರಿದರು.

ಜಿಲ್ಲೆಯಲ್ಲಿಯೂ ಬಿಜೆಪಿಯ ನಾಯಕರು ಸಮಗ್ರ ಯೋಜನೆ ಮತ್ತು ನೆರೆ ಪರಿಹಾರ ಕೊಡಿಸುವಲ್ಲಿ ವಿಫಲವಾಗಿದ್ದಾರೆ. ಉದ್ಯೋಗ ಖಾತಿ ಯೋಜನೆ ಸೇರಿ ಸಂಧ್ಯಾ ಸುರಕ್ಷಾ, ವಿಧವೆ, ಅಂಗವಿಲಕರು, ವಯೋವೃದ್ಧರಿಗೆ ನೀಡಬೇಕಾದ ಮಸಶಾನ ಕಳೆದ 6 ತಿಂಗಳಿಂದ ನೀಡಿಲ್ಲ. ಇಂದಿರಾ ಕ್ಯಾಂಟೀನ್ ಮುಚ್ಚಲು ಷಡ್ಯಂತ್ರ ನಡೆಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ಅಕ್ಕಿ ಪ್ರಮಾಣ ಕಡಿತಗೊಳಿಸಿ ಬಡವರ ಪರ ಇರುವ ಯೋಜನೆಗಳನ್ನು ರದ್ದುಪಡಿಸಲು ತಂತ್ರ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಕ್, ಸಮವಸ್ತ್ರ, ಪಠ್ಯಪುಸ್ತಕ, ಸ್ಕಾಲರ್​ಶಿಪ್ ನೀಡುವ ಯೋಜನೆ ಜಾರಿಗೆ ಚಕಾರ ಎತ್ತದೆ ಬಡ ವಿದ್ಯಾರ್ಥಿಗಳ ಶಿಕ್ಷಣದ ಮುನ್ನೆಡೆಗೆ ಎಳ್ಳುನೀರು ಬಿಟ್ಟಿದೆ ಎಂದರು.

ಸಿಎಂ, ಸಚಿವರಿಂದ ಸಿಗದ ಸ್ಪಂದನೆ: ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಸ್ವತಃ ಇದೇ ಜಿಲ್ಲೆಯವರೇ ಆದರೂ ಮರಳು ಸೇರಿ ಹಲವು ಗಂಭೀರ ಸಮಸ್ಯೆಗಳಿಗೆ ಗಮನ ಹರಿಸುತ್ತಿಲ್ಲ. ಗಾಂಜಾ, ಕೊಲೆ, ಸುಲಿಗೆ, ಕಳ್ಳತನ ನಿರಂತರವಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಂಗನ ಕಾಯಿಲೆ ಹತೋಟಿಗೆ ತರಲು ವಿಫಲವಾಗಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಬಡರೋಗಿಗಳು ಸೂಕ್ತ ಚಿಕಿತ್ಸೆ ಸಿಗದೇ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಸ್ಮಾರ್ಟ್​ಸಿಟಿ ಯೋಜನೆ ಕಳಪೆಯಾಗಿದ್ದು ಅನಗತ್ಯವಾಗಿ ಹಣ ಖರ್ಚು ಮಾಡಲಾಗುತ್ತಿದೆ. ಅಧಿಕಾರಿಗಳು ನಾಲ್ಕು ಗೋಡೆ ನಡುವೆ ಕುಳಿತು ತಮಗಿಷ್ಟ ಬಂದಂತೆ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ದೂರಿದರು.

ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕ ಎಚ್.ಸಿ.ಯೋಗೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ್, ವಿಶ್ವನಾಥ ಕಾಶಿ, ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್್ಕ ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮಾಜಿ ಸದಸ್ಯೆ ವಿಜಯಲಕ್ಷ್ಮೀ ಪಾಟೀಲ್, ರಾಮೇಗೌಡ, ಶ್ಯಾಮ್ುಂದರ್, ಚಿನ್ನಪ್ಪ, ಪ್ರವೀಣ್, ಸೌಗಂಧಿಕಾ, ಶಿವಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net