

ಮದ್ದೂರು: ಪಟ್ಟಣದ ತಮಿಳು ಕಾಲನಿ ನಿವಾಸಿಗಳು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪುರಸಭೆಯ ಕಚೇರಿ ಮುಂದೆ ಸೋಮವಾರ ಖಾಲಿ ಕೊಡಗಳನ್ನು ಇಟ್ಟುಕೊಂಡು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡರು.
ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸದ ಪುರಸಭಾ ಅಧಿಕಾರಿಗಳ ಬೇಜಾಬ್ದಾರಿ ಖಂಡಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಈ ಹಿಂದೆ ಹಲವಾರು ಬಾರಿ ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಾಲನಿಗೆ ಬಂದು ಶೀಘ್ರವಾಗಿ ಕುಡಿಯುವ ನೀರು ಕಲ್ಪಿಸುವಂತೆ ಮೌಖಿಕವಾಗಿ ಆದೇಶ ಮಾಡಿ ಹೋಗಿದ್ದರು. ಆದರೆ ಪುರಸಭಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
ಕಾಲನಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸ್ಥಳ ಪರಿಶೀಲನೆಗೆಂದು ಟಯೋಟಾ ಕಂಪನಿಯ ಅಧಿಕಾರಿಗಳು ಬಂದಾಗ ಪುರಸಭಾ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಕಂಪನಿ ಅಧಿಕಾರಿಗಳು ವಾಪಾಸ್ ಹೋಗಿದ್ದಾರೆ ಎಂದರು.
ಈ ಕೂಡಲೇ ಪುರಸಭಾ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಆಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಗದೀಶ್, ವೈದುನ, ಚಂದ್ರಶೇಖರ್, ಪ್ರಶಾಂತ್, ಜಯಂತ್, ಪುಟ್ಟಸ್ವಾಮಿ, ಶಾಂತಾ, ರೂಪಾ, ಗಂಗಾ, ಉಮಾ ಸೇರಿದಂತೆ ಇತರರು ಇದ್ದರು.