ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ

28-CHN-1
Published on

ಚಾಮರಾಜನಗರ: ನಗರದ 16ನೇ ವಾರ್ಡ್‌ನ ರೈಲ್ವೆ ಬಡಾವಣೆಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಬೀದಿಯ ನಿವಾಸಿಗಳು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.


ಶನಿವಾರ ನಗರದ ರೈಲ್ವೆ ಬಡಾವಣೆಯ ನಾಯಕರ ಬೀದಿಯಲ್ಲಿ ಜಮಾಯಿಸಿದ ನಿವಾಸಿಗಳು ಖಾಲಿ ಕೊಡ ಹಿಡಿದು ನಗರಸಭೆ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಬೀದಿಯ ನಿವಾಸಿ ಬುಲೆಟ್ ಚಂದ್ರ ಮಾತನಾಡಿ, ನಗರಸಭೆಗೆ ನೀರಿನ ಕಂದಾಯವನ್ನು ಕಟ್ಟುತ್ತಿದ್ದರೂ ಕಳೆದ 10-12 ವರ್ಷಗಳಿಂದ ಬಡಾವಣೆಯ ನಾಯಕ ಬೀದಿಯಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಸಮರ್ಪಕವಾಗಿ ಕಾವೇರಿ ಕುಡಿಯುವ ನೀರು ಬರುತ್ತಿಲ್ಲ. ಕಾವೇರಿ ಕುಡಿಯುವ ನೀರು ಕೊಡಿಸುವಂತೆ ನಗರಸಭಾ ಪೌರಾಯುಕ್ತರು, ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಒಂದು ತಿಂಗಳಲ್ಲಿ ನೆಪಮಾತ್ರಕ್ಕಾಗಿ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದ್ದು, ಅದು ಕೂಡ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಆಗಿದೆ. ಇತ್ತೀಚಿಗೆ ಮಳೆ, ಪ್ರವಾಹದಿಂದ ಬೋರ್ ನೀರು ಕಲುಷಿತವಾಗಿದ್ದು, ಅದನ್ನು ಕುಡಿದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಕೂಡಲೇ ನಾಯಕರ ಬೀದಿಗೆ ಕಾವೇರಿ ಜೀವಜಲ ಪೂರೈಕೆ ಮಾಡಬೇಕು ಇಲ್ಲದಿದ್ದರೆ ನಗರಸಭಾ ಕಚೇರಿಗೆ ನಿವಾಸಿಗಳೊಂದಿಗೆ ಮುತ್ತಿಗೆ ಹಾಕಿ, ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನಿವೃತ್ತ ಪೊಲೀಸ್ ವೆಂಕಟೇಶ್, ಸಿದ್ದರಾಜು, ರಾಜಣ್ಣ, ಕಾಳಶಟ್ಟಿ, ಚಿನ್ನಸ್ವಾಮಿ, ಕಾಳನಾಯಕ, ಮಹದೇವನಾಯಕ, ಸೂರಿ, ಕುಮಾರ್, ಗೌರಮ್ಮ, ರಾಜಮ್ಮ, ರೇಖಾ, ಸುಂದ್ರಮ್ಮ, ಚಂದ್ರಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net