ಖಾಲಿ ಇರುವ ಹುದ್ದೆ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ

mysore
Published on

ಮೈಸೂರು: ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರವು ಖಾಲಿ ಹುದ್ದೆಗಳ ಭರ್ತಿಗೆ ಕೋವಿಡ್ ಕಾರಣ ಹೇಳಿ ಯಾವುದೇ ಯತ್ನ ಮಾಡಲಿಲ್ಲ. ಬಿಜೆಪಿ ವೈಫಲ್ಯ ಎತ್ತಿ ತೋರಿಸುತ್ತಾ ಕಾಂಗ್ರೆಸ್ ಪಕ್ಷವು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿತ್ತು.

ಆದರೆ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಕಳೆದರೂ ಒಳ ಮೀಸಲಾತಿ ಹೆಸರಿನಲ್ಲಿ ಯಾವುದೇ ನೇಮಕಾತಿ ಮಾಡಿಲ್ಲ. ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯರೂಪಕ್ಕೆ ತರುವುದು ಎಂಬ ಯುವಜನತೆ ನಿರೀಕ್ಷೆ ಹುಸಿಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಯತ್ನಗಳು ನಡೆಯುತ್ತಿಲ್ಲ. ಕೆಲವು ಕುಂಟು ನೆಪ ಹೇಳುತ್ತಾ ನೇಮಕಾತಿ ಮುಂದೂಡಲಾಗುತ್ತಿದೆ.

ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಹಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. 4-5 ವರ್ಷಗಳಿಂದ ನೇಮಕಾತಿಗಳೇ ನಡೆಯದಿರುವುದರಿಂದ ಅದೆಷ್ಟೋ ಯುವ ಜನರು ತಮ್ಮ ಅರ್ಹತಾ ವಯಸ್ಸನ್ನು ಮೀರಿದ್ದಾರೆ. ಉದ್ಯೋಗದ ಭರವಸೆಯಿಲ್ಲದೆ ಯುವಜನರು ಆತ್ಮಹತ್ಯೆಯಂತಹ ಕಠಿಣ, ನೋವಿನ ನಿರ್ಧಾರಕ್ಕೆ ಮೊರೆ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಕೆಪಿಎಸ್‌ಸಿಯ ಅಧ್ಯಕ್ಷರು, ಸದಸ್ಯರ ಒಳಜಗಳ ಮತ್ತು ಅದರಲ್ಲಿನ ಭ್ರಷ್ಟಾಚಾರವು ನೇಮಕಾತಿಗಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಬೇಸರ ತರಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,454 ಹುದ್ದೆಗಳು ಖಾಲಿ ಬಿದ್ದಿವೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಮತ್ತೊಂದೆಡೆ ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಕಂದಾಯ, ಒಳಾಡಳಿತ ಸೇರಿದಂತೆ ಹಲವು ಇಲಾಖೆಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಜನಸಾಮಾನ್ಯರಿಗೆ ಸಿಗಬೇಕಾದ ಸೇವೆಗಳು ಸರಿಯಾಗಿ ತಲುಪುತ್ತಿಲ್ಲ. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಪುಡಿಗಾಸಿಗೆ, ಉದ್ಯೋಗ ಭದ್ರತೆ ನೀಡದೇ ದುಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಹಲವು ವರ್ಷಗಳಿಂದಲೂ ನೇಮಕಾತಿ ಇಲ್ಲದಿದ್ದರೂ ಚಾತಕಪಕ್ಷಿಯಂತೆ ನೇಮಕಾತಿಗಾಗಿ ಕಾಯುತ್ತಾ, ಸಾವಿರಾರು ರೂ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ, ಗ್ರಂಥಾಲಯಗಳಲ್ಲಿ ಓದಲು ಉದ್ಯೋಗಾಕಾಂಕ್ಷಿಗಳು ಖರ್ಚು ಮಾಡಿಕೊಂಡಿದ್ದಾರೆ. ಹಗಲಿರುಳು ಕೂಲಿನಾಲಿ ಮಾಡಿ, ಸಾಲ ಮಾಡಿ ಪಾಲಕರು ಮಕ್ಕಳಿಗೆ ಕೋಚಿಂಗ್ ಕೊಡಿಸುತ್ತಿದ್ದಾರೆ. ಇಷ್ಟೆಲ್ಲಾ ಗಂಭೀರ ಸಮಸ್ಯೆ ಯುವಜನರು ಎದುರಿಸುತ್ತಿದ್ದರೂ ಸರ್ಕಾರಗಳು ಈ ಬಗ್ಗೆ ಮಾನವೀಯವಾಗಿ ವರ್ತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಲಾದರೂ ಯಾವುದೇ ನೆಪ ಹೇಳದೆ, ಕೆಲವೇ ಸಾವಿರ ಹುದ್ದೆಗಳ ಭರ್ತಿಗೆ ಸೀಮಿತಗೊಳಿಸದೆ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು.

ಮುಖ್ಯವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ತಡೆಗಟ್ಟಿ, ಪಾರದರ್ಶಕತೆ ತರುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. 4-5 ವರ್ಷಗಳಿಂದ ನೇಮಕಾತಿ ನಡೆಯದ ಕಾರಣ ಅರ್ಹತಾ ವಯೋಮಿತಿಯಲ್ಲೂ ಕನಿಷ್ಠ ಐದು ವರ್ಷಗಳ ಸಡಿಲಿಕೆ ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚಿಗೆ ಕೆಇಎ ಮೂಲಕ ಹೊರಡಿಸಿರುವ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳಿಗೆ ದುಬಾರಿ ಅರ್ಜಿ ಶುಲ್ಕ ನಿಗದಿಪಡಿಸಿದ್ದು, ಅದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು. ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಿ, ಪಾರದರ್ಶಕತೆ ಕಾಪಾಡಲು ಸೂಕ್ತ ಕ್ರಮ ವಹಿಸಬೇಕು. ಪೊಲೀಸ್ ಕಾನ್‌ಸ್ಟೆಬಲ್ ವಯೋಮಿತಿಯನ್ನು ಸಾಮಾನ್ಯ ವರ್ಗ 30, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗಕ್ಕೆ 33 ವರ್ಷಗಳಿಗೆ ಹೆಚ್ಚಿಸಬೇಕು. ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು ಎಲ್ಲ ಹುದ್ದೆಗಳನ್ನು ಕಾಯಂ ಆಧಾರದಲ್ಲಿ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ಸಂಚಾಲಕಿ ನೀತುಶ್ರೀ, ಸಹ ಸಂಚಾಲಕರಾದ ಆದರ್ಶ್, ರಕ್ಷಿತ್, ಗಿರೀಶ್, ಟಿ.ಆರ್.ಸುನಿಲ್, ಎಸ್.ಸುಮಾ, ರಣಜಿತ್, ಪೂರ್ಣಿಮಾ, ಅನಿಲ್, ಸಿಂಚನ, ಪೃಥ್ವಿ, ರಜತ್, ಅನುಷ, ನಂಜುಂಡ ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net