ಖಾರ್​ಲ್ಯಾಂಡ್ ರಸ್ತೆ ದುರಸ್ತಿಗೆ ಆಗ್ರಹ

26KMT1a
Published on

ಕುಮಟಾ: ತಾಲೂಕಿನ ಹೊರಭಾಗ ರಸ್ತೆ ಹಾಗೂ ಇಲ್ಲಿನ ಖಾರ್​ಲ್ಯಾಂಡ್ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಗ್ರಾಮದ ಹರಿಕಂತ್ರ ಸಮಾಜದ ವತಿಯಿಂದ ಸೋಮವಾರ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ದೇವಗಿರಿ ಪಂಚಾಯಿತಿ ವ್ಯಾಪ್ತಿಗೊಳಪಡುವ ಹೊರಭಾಗ ಗ್ರಾಮದಲ್ಲಿ ಮೀನುಗಾರಿಕೆ, ಕೃಷಿ ಹಗೂ ಕೂಲಿಕಾರ್ವಿುಕ ವೃತ್ತಿ ಆಧಾರಿತ 200 ಕ್ಕೂ ಹೆಚ್ಚು ಕುಟುಂಬಗಳಿದೆ. ಊರಿನಿಂದ ಕುಮಟಾ- ಹೊನ್ನಾವರ ಅಥವಾ ಇನ್ನಾವುದೇ ಸ್ಥಳಕ್ಕೆ ತೆರಳಲು ಇರುವುದು ಒಂದೇ ರಸ್ತೆ. ಹಿನ್ನೀರು ಹಳ್ಳ-ಹೊಳೆ, ಗದ್ದೆಯ ನಡುವೆ ಸಾಗುವ ಈ ರಸ್ತೆ ಸಂಪೂರ್ಣ ಹಾಳಾಗಿದೆ. ಖಾರ್​ಲ್ಯಾಂಡ್ ವ್ಯವಸ್ಥೆ ಹಾಳಾಗಿರುವುದರಿಂದ ಚಿಕ್ಕ ಮಳೆಗೂ ಪ್ರವಾಹ ನಿರ್ವಣವಾಗಿ ರಸ್ತೆಯನ್ನು ಕೊಚ್ಚಿಕೊಂಡು ಹೋಗುತ್ತದೆ.

ಗ್ರಾಮದಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಮೀನು ಮಾರಾಟದ ಮಹಿಳೆಯರು ಇದೇ ರಸ್ತೆಯಲ್ಲಿ ತೆರಳುತ್ತಾರೆ. ಇಲ್ಲಿಯ ದೇವಸ್ಥಾನಕ್ಕೆ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಊರಿನ ಎಲ್ಲಾ ಅಗತ್ಯಗಳಿಗೂ ಈ ರಸ್ತೆಯೇ ಮೂಲಭೂತವಾಗಿದೆ. ಆದರೆ ರಸ್ತೆ ಸಂಪೂರ್ಣ ಹೊಂಡಮಯವಾಗಿ ಪಕ್ಕಾ ರಸ್ತೆಯೇ ಇಲ್ಲದಂತಾಗಿದೆ.

ಖಾರ್​ಲ್ಯಾಂಡ್ ಬಂಡು, ಸೇತುವೆಗಳು ಜೀರ್ಣವಾಗಿದ್ದು ಮಳೆಗಾಲ ದಲ್ಲಿ ಹೊಳೆ-ಹಳ್ಳದಂಚಿನ ನಿವಾಸಿಗಳು ಭಯದಲ್ಲೇ ಬದುಕುವಂತಾಗಿದೆ. ಹೀಗಾಗಿ ಕೂಡಲೇ ರಸ್ತೆ ಹಾಗೂ ಖಾರ್​ಲ್ಯಾಂಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿಯಲ್ಲಿ ಕೋರಲಾಯಿತು. ಮನವಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶೆಟ್ಟಿ ಭರವಸೆ ನೀಡಿದರು. ಈ ವೇಳೆ ಸುರೇಶ ಹರಿಕಾಂತ, ನಾಗೇಂದ್ರ ಶೇರುಗಾರ, ನಾಗೇಶ ಹರಿಕಾಂತ, ಗಣಪ್ಪ, ಬಾಬಯ್ಯ ಹರಿಕಾಂತ, ವೆಂಕಟ್ರಮಣ, ಉಮೇಶ, ತಮ್ಮಯ್ಯ ಹರಿಕಾಂತ, ನಾಗರಾಜ ತಾಂಡೇಲ್, ಲಿಂಗಪ್ಪ ಹರಿಕಾಂತಇನ್ನಿತರರು ಇದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net