

ಚಿತ್ರದುರ್ಗ: ಖಾದಿ ವಸ್ತ್ರೋದ್ಯಮ 10 ವರ್ಷಕ್ಕೂ ಹಿಂದೆ ನೆಲ ಕಚ್ಚಿತ್ತು. ಕೇವಲ ರಾಜಕಾರಣಿಗಳ ಪೋಷಾಕಾಗಿ ಉಳಿದಿತ್ತು. ಆದರೆ, ನರೇಂದ್ರಮೋದಿ ಅವರು ಪ್ರಧಾನಿಯಾದ ನಂತರ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿ ಕೊಟ್ಟಿದ್ದಾರೆ ಎಂದು ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್‌ಕುಮಾರ್ ಹೇಳಿದರು.
ನಗರದ ಕೇಂದ್ರೀಯ ಹಂಜಿ ಕಾರ್ಯಾಗಾರದಲ್ಲಿ ಆಧುನೀಕರಣಗೊಂಡ ಸೆಂಟ್ರಲ್ ಸ್ಲಿವರ್ ಪ್ಲಾಂಟ್ ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಜನರು ಖಾದಿ ಬಳಸಬೇಕೆಂಬ ಗಾಂಧೀಜಿ ಅವರ ಕನಸನ್ನು ಮೋದಿ ಅವರು ನನಸಾಗಿಸಿದ್ದಾರೆ. ವಿಶ್ವಮಟ್ಟದಲ್ಲಿ ಫ್ಯಾಷನ್ ಆಗಿ ಹೊರಹೊಮ್ಮಿದ್ದು, ಲೋಕಲ್ ಟು ಗ್ಲೋಬಲ್ ಹಂತಕ್ಕೆ ಏರಿದೆ. ಬೆಂಗಳೂರು-ಹುಬ್ಬಳಿ ವಿಭಾಗ ಬಹಳ ಪರಿಶ್ರಮದಿಂದ ಉನ್ನತ ಮಟ್ಟಕ್ಕೆ ಏರಿ ದೇಶಕ್ಕೆ ಮಾದರಿಯಾಗಿವೆ ಎಂದರು.
4 ಲಕ್ಷ ಮಹಿಳೆಯರು: ಹತ್ತು ವರ್ಷದ ಹಿಂದೆ ಜಾಗತಿಕವಾಗಿ 30 ಸಾವಿರ ಕೋಟಿ ರೂ. ಇದ್ದ ಖಾದಿ ವಹಿವಾಟು, ಈಗ 1 ಲಕ್ಷ ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಆಯೋಗದಡಿ 3 ಸಾವಿರ ಖಾದಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, 5ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 4 ಲಕ್ಷ ಮಹಿಳೆಯರೇ ಇರುವುದು ವಿಶೇಷ ಎಂದು ತಿಳಿಸಿದರು.
ನೇಕಾರ ಕೂಲಿಯನ್ನು ಶೇ 7.7ರಿಂದ ಶೇ 10ಕ್ಕೆ ಏರಿಸಲಾಗಿದೆ. ಬರುವ ಏಪ್ರಿಲ್ ವೇಳೆಗೆ ಅದನ್ನು ಶೇ 33ರಷ್ಟು ಏರಿಸಲು ಚಿಂತಿಸಲಾಗಿದೆ. ಮುಂದಿನ ವರ್ಷ ಮಹಿಳಾ ಸಿಲಾಯಿ ಸಮೃದ್ಧಿ ಯೋಜನೆ ಜಾರಿಗೊಳಿಸಲಾಗುವುದು. ಚಿತ್ರದುರ್ಗ ಜಿಲ್ಲೆಯ ಬಾಕಿ ಇರುವ ಮೂರು ಘಟಕಗಳ ಆಧುನೀಕರಣವನ್ನು ಆದಷ್ಟು ಶೀಫ್ರವಾಗಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದ ಕೆಲವು ಭಾಗಗಳಲ್ಲಿನ ಸಂಸ್ಥೆಗಳ ಅಗತ್ಯತೆಗಳನ್ನು ಪೂರೈಸುವುದರೊಂದಿಗೆ, 200ಕ್ಕೂ ಹೆಚ್ಚು ಖಾದಿ ಸಂಸ್ಥೆಗಳಿಗೆ ಬೆನ್ನಲುಬಾಗಿದೆ. ಸುಮಾರು 2ರಿಂದ 3ಲಕ್ಷ ಖಾದಿ ಕುಶಲಕರ್ಮಿಗಳು, ನೂಲೂ ತೆಗೆಯುವವರು ಹಾಗೂ ನೇಕಾರರಿಗೆ ಪ್ರಯೋಜನವಾಗಿದೆ. ದಕ್ಷಿಣ ಭಾರತದ ಖಾದಿ ಉತ್ಪಾದನಾ ಸಂಸ್ಥೆಗಳಿಗೆ ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ಗುಣಮಟ್ಟದ ಪ್ರೈವರ್ ರೋವಿಂಗ್‌ಗಳನ್ನು ಉತ್ಪಾದಿಸಿ ಸರಬರಾಜು ಮಾಡಲಾಗುತ್ತಿದೆ. ಆದಾಯ ಹೆಚ್ಚಳಕ್ಕೂ ಸಹಕಾರಿಯಾಗಿದೆ ಎಂದರು.
ಮುಂಬಯಿ ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಉಪ ಸಿಇಒ ಪನ್ವರುತು, ಬೆಂಗಳೂರು ಮಂಡಳಿಯ ಸಿಇಒ ಎಚ್.ಆರ್.ರಾಜಪ್ಪ, ಉಪ ಸಿಇಒ ಎಲ್.ಮದನ್‌ಕುಮಾರ್ ರೆಡ್ಡಿ, ತಾಂತ್ರಿಕ ಮೇಲ್ವಿಚಾರಕ ರಮೇಶ್ ಇಟಗಿ, ಚಿತ್ರದುರ್ಗ ವಿಭಾಗದ ಕೇಂದ್ರೀಯ ಹಂಜಿ ಕಾರ್ಯಾಗರದ ಯೋಜನಾ ವ್ಯವಸ್ಥಾಪಕ ಸೆಂಥಿಲ್‌ಕುಮಾರ್ ರಾಮಸ್ವಾಮಿ ಇತರರಿದ್ದರು.