

ಚಿತ್ರದುರ್ಗ: ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಗಮನ ನೀಡದೆ, ಆಕರ್ಷಣೆಯ ಉತ್ಪನ್ನಗಳಿಗೆ ಮಾರು ಹೋಗುವುದು ಸರಿಯಲ್ಲವೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಖಾದಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಖಾದಿ ಬಟ್ಟೆ ಬಳಸಬೇಕು. ಇದು ಆರೋಗ್ಯಕ್ಕೆ ಅನುಕೂಲವಾದ ಉಡುಪು ಕೂಡ ಆಗಿದೆ. ಖಾದಿ ಸಹಿತ ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಗಾಂಧೀಜಿ ಹೇಳಿದ್ದಾರೆ. ಖಾದಿ ಬಳಕೆಯಿಂದ ಹತ್ತಿಗೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಸೌಲಭ್ಯ ದೊರಕುತ್ತದೆ. ದುಡಿಯುವ ಕೈಗೆ ಕೆಲಸವೂ ದೊರೆಯಲಿದೆ. ಈ ಹಿನ್ನಲೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಖಾದಿ ಬಳಕೆಯೆಡೆ ಜಾಗೃತಿ ಮೂಡಿಸುತ್ತಿದೆ ಎಂದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸಿಇಒ ಎಚ್.ಆರ್.ರಾಜಪ್ಪ ಮಾತನಾಡಿ, ಖಾದಿ ಉತ್ಪನ್ನದ ಹಿಂದೆ ಶ್ರಮಿಕರ ಬೆವರಿದೆ. ಸ್ವಾತಂತ್ರ್ಯದ ಗುರಿ ಸಾಧನೆಗೆ ಖಾದಿ ನೆರವಾಗಿದೆ. ಅ.2ರಿಂದ 31ರ ವರೆಗೆ ದೇಶಾದ್ಯಂತ ಖಾದಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಖಾದಿ ಅಂದರೆ ಸರಳತೆ, ಸ್ವಾವಲಂಬನೆ, ಸಂಯಮ, ರಾಷ್ಟ್ರೀಯತೆ ಎಂದು ಹೇಳಿದರು.
ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಖಾದಿ ಜಾಗೃತಿ ಜಾಥಾಕ್ಕೆ ಮೈದಾನದಲ್ಲಿ ಚಾಲನೆ ನೀಡಲಾಯಿತು. ಬಳಿಕ ಪ್ರತಿಜ್ಞೆ ಸ್ವೀಕಾರದ ಬಳಿಕ ಜಾಥಾ ಬಿ.ಡಿ.ರಸ್ತೆ, ವಿವಿಧ ವೃತ್ತಗಳ ಮೂಲಕ ಒನಕೆ ಓಬವ್ವ ವೃತ್ತವನ್ನು ಸೇರಿತು.
ವಿವಿಧ ಘೋಷಣಾ ಫಲಕಗಳೊಂದಿಗೆ ವಿದ್ಯಾರ್ಥಿಗಳು, ಖಾದಿ ಸಂಸ್ಥೆಗಳ ಕುಶಲಕರ್ಮಿಗಳು, ಎನ್‌ಎಸ್‌ಎಸ್, ಖಾದಿ ಅಭಿಮಾನಿಗಳು ಪಾಲ್ಗೊಂಡಿದ್ದರು.
ಗಾಂಧಿವಾದಿ ಎಚ್‌ಕೆಎಸ್ ಸ್ವಾಮಿ ಅವರು ಚರಕದ ಮೂಲಕ ಹತ್ತಿ ನೂಲು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಆಯೋಗದ ಉಪನಿರ್ದೇಶಕ ಸೆಂಥಿಲ್ ರಾಮಸ್ವಾಮಿ, ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಲೋಕೇಶ್ ಮತ್ತಿತರರು ಇದ್ದರು.