

ಮುಂಡಗೋಡ: ತಾಲೂಕು ಪ್ರಾಂತ ಕೃಷಿ ಕೂಲಿಕಾರರ ಸಂಘದವರು ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಪಾಳಾ, ಮಳಗಿ, ನಾಗನೂರ- ಹನುಮಾಪುರ, ಬಾಚಣಕಿ ಮತ್ತು ಚಿಗಳ್ಳಿ ಗ್ರಾಮ ಪಂಚಾಯಿತಿಗಳ ಕಾಮಗಾರಿ ಆರಂಭಿಸಿದ್ದಾರೆ.
ಪಾಳಾ ಗ್ರಾ.ಪಂ.ನ ರಾಮಾಪುರ ಗವಿಮಠ ಅರಣ್ಯ ಪ್ರದೇಶದಲ್ಲಿ 3 ಲಕ್ಷ ರೂ. ಅನುದಾನದಲ್ಲಿ ಇಂಗು ಗುಂಡಿ ಕಾಮಗಾರಿ ಆರಂಭಿಸಲಾಗಿದೆ. ಪಾಳಾ ಗ್ರಾಮದ ಒಟ್ಟು 215 ಕೂಲಿಕಾರರು ಇದ್ದಾರೆ. 2009-10ರಿಂದ ಉದ್ಯೋಗ ಖಾತ್ರಿ ಕಾಮಗಾರಿ ಆರಂಭವಾದಾಗಿನಿಂದ ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿ ರೈತರಿಗೆ ಬೇಸಿಗೆ ಬೇಸಾಯ ಮಾಡಲು ಅನುಕೂಲವಾಗಿದೆ. ಅಂತರ್ಜಲ ಹೆಚ್ಚಾಗಿದೆ. ಇಂಗು ಗುಂಡಿಗಳು ಹೆಚ್ಚಾಗಬೇಕು. ಕೂಲಿಕಾರರಿಗೆ ಕಾಮಗಾರಿ ಸಿಕ್ಕಿರುವುದರಿಂದ ಅನುಕೂಲವಾಗಿದೆ. ಹಬ್ಬ- ಹರಿದಿನಗಳಲ್ಲಿ ಸಂಘ- ಸಂಸ್ಥೆಗಳಲ್ಲಿ ಸಾಲ ಮಾಡಬೇಕಾಗಿತ್ತು. ಶೇ. 50ರಷ್ಟು ಹೊರೆ ಕಡಿಮೆಯಾಗಿದ್ದು, ಪೂರ್ತಿ ಕಡಿಮೆಯಾಗಬೇಕಾದರೆ ದಿನಕ್ಕೆ ಪ್ರತಿ ಕೂಲಿಕಾರನಿಗೆ ನೀಡುತ್ತಿರುವ 285 ರೂ. ಕೂಲಿಯನ್ನು ಪುರುಷ ಮತ್ತು ಮಹಿಳೆ ಇಬ್ಬರಿಗೂ ದಿನಕ್ಕೆ 600 ರೂ.ಗೆ ಏರಿಸಬೇಕು. ಕೂಲಿಕಾರರಿಗೆ ವರ್ಷಕ್ಕೆ 200 ದಿನಗಳ ಕೆಲಸ ನೀಡಬೇಕು ಎಂದು ಕೂಲಿಕಾರರು ಒತ್ತಾಯಿಸಿದ್ದಾರೆ.
ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಇರುತ್ತವೆ. ತಾಲೂಕಿನ ಹಳ್ಳಿಗಳ ಬಡ ಕೂಲಿಕಾರರು, ಸಣ್ಣ ರೈತರು ಅಥವಾ ಭೂಮಿ ಇಲ್ಲದ ಕೂಲಿಕಾರರು ಈ ಯೋಜನೆಯ ಸದುಪಯೋಗ ಪಡೆಯಬೇಕು. ಗ್ರಾ.ಪಂ. ಅಧಿಕಾರಿಗಳು ಮತ್ತು ಪಿಡಿಒಗಳು ಜೆಸಿಬಿಯಿಂದ ಕೆಲಸ ಮಾಡಿಸದೇ ಬಡ ಕೂಲಿಕಾರರಿಗೆ ಕೆಲಸ ನೀಡಬೇಕು. | ಭೀಮಣ್ಣ ಭೋವಿ ತಾಲೂಕು ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ
*