ಖಾತಾ ಆಂದೋಲನ ರಾಜಕೀಯ ಲಾಭ ಪಡೆಯಲು ಅಲ್ಲ

9kglphoto7
ಕೊಳ್ಳೇಗಾಲ ಪಟ್ಟಣದ ಲಿಂಗಣಾಪುರಲ್ಲಿ ಸೋಮವಾರ ಆಯೋಜಿಸಿದ್ದ ಖಾತಾ ಆಂದೋಲನ ಕಾರ್ಯಕ್ರಮಕ್ಕೆ ಶಾಸಕ ಎನ್.ಮಹೇಶ್ ಸಸಿಗೆ ನೀರೆಯುವ ಮೂಲಕ ಚಾಲನೆ ನೀಡಿದರು.
Published on

ಕೊಳ್ಳೇಗಾಲ: ಹಲವು ವರ್ಷಗಳ ಜನರ ಬೇಡಿಯಂತೆ ಖಾತಾ ಆಂದೋಲನ ಕಾರ್ಯಕ್ರಮ ನಗರಸಭೆ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆಯೇ ವಿನಹ ಇದು ಯಾವುದೇ ರಾಜಕೀಯ ಲಾಭ ಪಡೆಯಲು ಅಲ್ಲ ಎಂದು ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದರು.

ನಗರಸಭೆ ವ್ಯಾಪ್ತಿಯ 24ನೇ ವಾರ್ಡಿಗೆ ಸೇರಿದ ಲಿಂಗಣಾಪುರದಲ್ಲಿ ಸೋಮವಾರ ಆಯೋಜಿಸಿದ್ದ ಖಾತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಲ್ಲಿನ 31 ವಾರ್ಡ್‌ಗಳ ಪೈಕಿ ಬಹುತೇಕ ವಾರ್ಡ್ ಜನರು ತಮ್ಮ ಆಸ್ತಿಗಳಿಗೆ ದಾಖಲೆಗಳು ಇಲ್ಲದೆ ಉಸಿರುಗಟ್ಟಿದ ವಾತಾವರಣದಲ್ಲಿ ಜೀವನ ದೂಡುತ್ತಿದ್ದಾರೆ. ಸರ್ಕಾರದಿಂದ ಬರುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದ್ದರಿಂದ ನಗರಸಭೆಯಲ್ಲಿ ಖಾತಾ ಆಂದೋಲನ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ಮುಂದಿನ ವಿಧಾನಸಭಾ ಎಲೆಕ್ಷನ್ ಗಿಮಿಕ್ ಅಲ್ಲ ಎಂದು ಪುನರುಚ್ಚರಿಸಿದರು.
ಮೂಲ ದಾಖಲಾತಿ ಇಲ್ಲದ ನಿವಾಸಿಗಳ ಮನೆ, ಸೈಟ್ ಸೇರಿದಂತೆ ಹಿತ್ತಲು ಜಾಗಗಳಿಗೆ ನಗರಸಭೆಯಿಂದ ಪ್ರಸಕ್ತ ವರ್ಷದಲ್ಲಿ ಇ-ಸ್ವತ್ತು ದೊರಕಿಸುವ ನಿಟ್ಟಿನಲ್ಲಿ ಖಾತಾ ಆಂದೋಲನ ಕಾರ್ಯಕ್ರಮ ಒಂದಷ್ಟು ಕೆಲಸ ಮಾಡಲಿದೆ. ಅರ್ಜಿದಾರರ ಆಸ್ತಿಗಳ ಚಕ್ಕುಬಂದಿಯಲ್ಲಿ ವಾಸಿಸುತ್ತಿರುವ ಸ್ಥಳೀಯರ ಮಹಜರು ವರದಿ ಆಧರಿಸಿ ಸ್ಥಳದಲ್ಲಿಯೇ ಸುಲಭ ರೀತಿಯಲ್ಲಿ ಖಾತೆ ಮಾಡಿಕೊಡಲು 2021ರಲ್ಲಿ ನಗರಸಭೆ ಕೌನ್ಸಿಲ್ ಸಭೆ ತೀರ್ಮಾನ ಕೈಗೊಂಡಿದೆ. ಆದರೆ, ಅಲ್ಲಿಂದಾಚೆಗೆ ಎದುರಾದ ಕೆಲವು ಚುನಾವಣೆ ಪ್ರಕ್ರಿಯೆಗಳಿಂದ ಕಾರ್ಯಕ್ರಮ ಅನುಷ್ಠಾನ ವಿಳಂಬವಾಗಿದೆ ಎಂದರು.

ಈ ತಿಂಗಳು ಪೂರ್ತಿ ಎಲ್ಲ ವಾರ್ಡ್‌ಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ನಿತ್ಯ ನಿಮ್ಮ ವಾರ್ಡ್ ಸದಸ್ಯರ ಜತೆಗೂಡಿ ನಗರಸಭಾ ಅಧಿಕಾರಿಗಳ ತಂಡ ಸರತಿಯಂತೆ ನಿಮ್ಮ ಬಡಾವಣೆಗಳಿಗೆ ಭೇಟಿ ನೀಡಲಿದ್ದು, ಈ ಸೌಲಭ್ಯವನ್ನು ಪ್ರತಿಯೊಬ್ಬರೂ ತಪ್ಪದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅರ್ಜಿದಾರರು, ನಿಮ್ಮಲ್ಲಿ ಲಭ್ಯವಿರುವ ದಾಖಲೆಗಳನ್ನು ನಗರಸಭಾ ಅಧಿಕಾರಿಗಳಿಗೆ ನೀಡಿ. ನಿಮ್ಮ ಆಸ್ತಿಯನ್ನು ಖಾತೆ ಮಾಡಿಸುವ ಸಂಬಂಧ ಸರ್ಕಾರಕ್ಕೆ ಸಂದಾಯ ಮಾಡಬೇಕಾದ ಕಂದಾಯಗಳನ್ನು ಪಾವತಿಸಲಾಗದಿದ್ದ ಸನ್ನಿವೇಶವಿದ್ದರೂ ಅದನ್ನು ಮುಕ್ತವಾಗಿ ಅರ್ಜಿ ಮೂಲಕ ತಿಳಿಸಿ. ಈ ಬಗ್ಗೆ ಮುಂದೇನು ಮಾಡಬೇಕು ಎಂಬುದನ್ನು ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡುತ್ತೇವೆ. ಇಲ್ಲವೇ ಸಂದಾಯ ಮಾಡುವುದಾದರೆ, ತಕ್ಷಣ ಮಾಡಿ ಆಸ್ತಿಗಳಿಗೆ ಇ-ಸ್ವತ್ತು ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಹಳೆಯ ಕಂದಾಯ ಕಟ್ಟಲಾಗದು: 24ನೇ ವಾರ್ಡ್ ಸದಸ್ಯ ಜಯರಾಜ್ ಮಾತನಾಡಿ, ಜನರು ಅವರ ಮೂಲ ಆಸ್ತಿಗಳಿಗೆ ಕಾರ್ಯಕ್ರಮದಲ್ಲಿ ಇ-ಸ್ವತ್ತು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ, ನಗರಸಭೆ ಅಧಿಕಾರಿಗಳು ಜನರನ್ನು 20 ವರ್ಷದ ಕಂದಾಯ, ನೀರಿನ ಕರ ಪಾವತಿಸಿ ಎಂದು ಸೂಚಿಸುತ್ತಿದ್ದು ಒಂದು ವೇಳೆ ಜನರು ಇದನ್ನು ಕಟ್ಟಬೇಕೆಂದರೆ ಅಂದಾಜು 30 ಸಾವಿರ ರೂ.ಗೂ ಹೆಚ್ಚು ಹಣ ಹೊಂದಿಸಿಕೊಳ್ಳಬೇಕಾಗುತ್ತದೆ. ಎನ್.ಮಹೇಶ್ ಅವರನ್ನು ಶಾಸಕರಾದ ನಂತರ ಈ ಸಮಸ್ಯೆಯನ್ನು ಸದನದಲ್ಲಿ ಚರ್ಚಿಸಿ ಎಂದು ಕೇಳಿಕೊಳ್ಳಲಾಗಿತ್ತು. ಆದರೆ ಆ ಕೆಲಸವಾಗಿಲ್ಲ. ಒಂದು ವೇಳೆ ಈ ಕೆಲಸವನ್ನು ಶಾಸಕರು ಮಾಡಿದ್ದರೆ ರಾಜ್ಯದ ಸ್ಥಳಿಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಲಕ್ಷಾಂತರ ಜನರ ಸಮಸ್ಯೆ ಬಗೆಹರಿಯುತ್ತಿತ್ತು ಎಂದರು.

ಇದಕ್ಕೆ ಶಾಸಕ ಎನ್.ಮಹೇಶ್ ಸಮಜಾಯಿಷಿ ನೀಡಿ, ವಿಧಾನಸಭೆ ಸ್ವೀಕರ್ ತಮ್ಮ ಪೀಠದಲ್ಲಿ ಕುಳಿತು ಈಗಾಗಲೇ ಎಲ್ಲರಿಗೂ ಇ-ಸ್ವತ್ತು ಹೊಂದುವ ವಿಚಾರದಲ್ಲಿ ಹೊಸ ಆದೇಶ ಹೊರಡಿಸಲಿದ್ದಾರೆ. ಇದಕ್ಕೆ ಪೂರಕವೆಂಬಂತೆ ಎಷ್ಟು ವಾರ್ಡ್‌ಗಳ ಎಷ್ಟು ಜನರು ಕಂದಾಯ ಪಾವತಿಸಲು ಸಾಧ್ಯವಿಲ್ಲ ಎಂಬುದರ ಅಂದಾಜು ತಿಳಿಯಲು ಖಾತಾ ಆಂದೋಲನ ಸಹಕಾರಿಯಾಗಲಿದೆ. ನಂತರ ಎಲ್ಲವನ್ನು ಸರ್ಕಾರದ ಮುಂದೆ ತರೋಣ ಎಂದರು.

ನಗರಸಭಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಮಾಜಿ ಅಧ್ಯಕ್ಷ ಜಿ.ಸೆಲ್ವರಾಜ್, ಸದಸ್ಯರಾದ ರಾಮಕೃಷ್ಣ, ನಾಸೀರ್ ಷರೀಫ್, ಎನ್.ಮಧುಚಂದ್ರ, ಎಂ.ನಟರಾಜು, ಪೌರಾಯುಕ್ತ ಎಸ್.ನಂಜುಂಡಸ್ವಾಮಿ, ಕಂದಾಯ ನಿರೀಕ್ಷಕರಾದ ರಾಘವೇಂದ್ರ, ಪ್ರದೀಪ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net