

ಹುಬ್ಬಳ್ಳಿ: ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದರೆ ಬಡತನ ಹೋಗುತ್ತದೆಯೇ ಎಂದು ಬಾಲಿಶ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯದಿಂದ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವವೇ ಇಂದು ಭಾರತದ ಮಹಾ ಕುಂಭಮೇಳದತ್ತ ನೋಡುತ್ತಿದೆ. ದೇಶಾದ್ಯಂತ ಜನರು ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಲು ಕಾತರಿಸುತ್ತಿದ್ದಾರೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ಕುಂಭಮೇಳದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಲು ಹಾತೊರೆಯುತ್ತಿದ್ದಾರೆ. ಈ ಒಂದು ಮೇಳ ಯಶಸ್ವಿಯಾಗಿ ನಡೆಯುತ್ತಿರುವುದು ಕಾಂಗ್ರೆಸ್ಸಿನ ಹಿರಿಯ ನಾಯಕ ಖರ್ಗೆ ಅವರಿಗೆ ಸಹಿಸಲಿಕ್ಕಾಗುತ್ತಿಲ್ಲವೇನೋ ಎಂದಿದ್ದಾರೆ.
ಮೇಳದಲ್ಲಿ ಸ್ನಾನ ಮಾಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಲು ಕೇವಲ ರಾಜಕಾರಣಿಗಳು ಮಾತ್ರ ಬರುತ್ತಿಲ್ಲ. ದೇಶದ ಮೂಲೆ ಮೂಲೆಗಳಿಂದ ಅಲ್ಲದೆ ವಿದೇಶಗಳಿಂದಲೂ ಕೂಡ ಸಾಧು-ಸಂತರು ಹಾಗೂ ಜನರು ಸ್ವಯಂ ಪ್ರೇರಿತರಾಗಿ ಬಂದು ಪುನೀತರಾಗುತ್ತಿದ್ದಾರೆ. ಹೀಗಿದ್ದಾಗ ಖರ್ಗೆಯವರ ಮಾತುಗಳು ಅವರಿಗೆ ಬುದ್ಧಿ ಸ್ಥಿಮಿತದಲ್ಲಿರಲಿಕ್ಕಿಲ್ಲ ಎಂಬುದನ್ನು ತೋರಿಸುತ್ತದೆ. ಖರ್ಗೆಯವರಿಗೆ ವಯಸ್ಸಾಗಿದೆ. ಸೋನಿಯಾ ಗಾಂಧಿ , ರಾಹುಲ ಗಾಂಧಿಯವರನ್ನು ಒಲೈಸಲು ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವುದನ್ನು ಅವರು ನಿಲ್ಲಿಸಲಿ ಎಂದು ಆಗ್ರಹಿಸಿದ್ದಾರೆ.