ಖರ್ಗೆ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ

Revunayak Belamagi
Published on

ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ರಾಜ್ಯಸಭಾ ಸದಸ್ಯರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾತನಾಡುವ ನೈತಿಕತೆ ಸಂಸದ ಡಾ.ಉಮೇಶ ಜಾಧವ್ ಅವರಿಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್, ಮಾಜಿ ಸಚಿವ ರೇವೂನಾಯಕ ಬೆಳಮಗಿ ಗುಡುಗಿದ್ದಾರೆ.

ಖರ್ಗೆ ದಿಶಾ ಸಭೆ ಮಾಡಿಲ್ಲ ಎಂದು ಹೇಳಿರುವ ಜಾಧವ್, ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಒಮ್ಮೆಯಾದರೂ ಭೇಟಿ ನೀಡಿ ಜನರ ಸಂಕಷ್ಟ ಆಲಿಸಿದ್ದೀರಾ? ರೈತರ ಕಷ್ಟ, ಬರ, ಆತ್ಮಹತ್ಯೆ ನಡೆದಿವೆ. ಭೇಟಿಯಾಗಿ ಸಾಂತ್ವನ ಹೇಳುವ ಕೆಲಸ ಮಾಡಿದ್ದೀರಾ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರಶ್ನಿಸಿದರು.

ನಾಲ್ಕು ವರ್ಷಗಳಿಂದ ಕಳೆದು ಹೋಗಿದ್ದ ಸಂಸದ ಡಾ.ಜಾಧವ್ ಎಂಪಿ ಎಲೆಕ್ಷನ್ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಲೋಕಸಭಾ ವ್ಯಾಪ್ತಿಯ ಕೇವಲ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿರುವ ಅವರು, ಬಿಜೆಪಿ ಕಾರ್ಯಕರ್ತರು, ಮತದಾರರನ್ನು ಓಲೈಸಲು ಖರ್ಗೆ ವಿರುದ್ಧ ಮಾತನಾಡಲು ಶುರು ಮಾಡಿದ್ದಾರೆ. ಇದೊಂದು ಚುನಾವಣಾ ಗಿಮಿಕ್ ಎಂದು ಲೇವಡಿ ಮಾಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಚಿಂಚೋಳಿಯಲ್ಲಿ ಜನಸ್ಪಂದನ, ಕಲಬುರಗಿಯಲ್ಲಿ ೪೦ಕ್ಕೂ ಹೆಚ್ಚು ಸಭೆ ಮಾಡಿದ್ದಾರೆ. ಆದರೂ ಅವರು ಕಳೆದು ಹೋಗಿದ್ದಾರೆ ಎಂದು ಜಾಧವ್ ಹೇಳಿದ್ದು ಹಾಸ್ಯಾಸ್ಪದ ಎಂದರು. ಪ್ರಿಯಾಂಕ್ ಮರಳು ಮಾಫಿಯಾಕ್ಕೆ ಕಡಿವಾಣ ಜತೆಗೆ ಅನೈತಿಕ ಚಟುವಟಿಕೆಗೆ ಬ್ರೇಕ್ ಹಾಕಿದ್ದಾರೆ. ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಸಹಿಸಲಾಗದೆ ಹತಾಶರಾಗಿ ಮಾತನಾಡುತ್ತಿದ್ದಾರೆ. ಹೇಳಿಕೆ ನೀಡುವ ಮುನ್ನ ಡಾ.ಜಾಧವ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿವಿದರು.

ಚಿಂಚೋಳಿ ತಾಲೂಕಿನಲ್ಲಿ ಕೆಲಸ ಅರಸಿ ೩೦ ಸಾವಿರಕ್ಕೂ ಹೆಚ್ಚು ಜನ ಗುಳೆ ಹೋಗುತ್ತಿದ್ದಾರೆ. ಈ ಬಗ್ಗೆ ಹತ್ತು ವರ್ಷದಲ್ಲಿ ಡಾ.ಜಾಧವ್ ಏನು ಮಾಡಿದ್ದಾರೆ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net