

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಕೆಲದಿನಗಳ ಹಿಂದೆ ತಾಲೂಕಿನಲ್ಲಿನ ರಸಗೊಬ್ಬರದ ಸಮಸ್ಯೆ ವಿಧಾನಸಭೆ ಕಲಾಪದಲ್ಲಿ ಚರ್ಚೆಯಾಗುವ ಮೂಲಕ ಸುದ್ದಿಯಾಗಿತ್ತು. ಇದೀಗ, ರೈತನೊಬ್ಬ ಖರೀದಿಸಿರುವ ರಸಗೊಬ್ಬರ ನಕಲಿಯಾಗಿದ್ದು ಮತ್ತೊಮ್ಮೆ ಸುದ್ದಿಯಾಗಿದೆ.
ಹೌದು.., ತಾಲೂಕಿನ ಬೇವೂರು ಗ್ರಾಮದ ರೈತ ಮಹೇಶ್ ಎಂಬುವವರು ಮುಸುಕಿನ ಜೋಳದ ಬೆಳೆಗೆ ಬಿತ್ತನೆ ಸಮಯದಲ್ಲಿ ಹಾಕಲು ಡಿಎಪಿ ಗೊಬ್ಬರ ಖರೀದಿಸಿದ್ದರು. ಬೆಳೆಗೆ ರಸಗೊಬ್ಬರ ಹಾಕಿದರೂ ಬೆಳೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ರಸಗೊಬ್ಬರದಿಂದ ಯಾವುದೇ ಫಲಿತಾಂಶ ಬಾರದ್ದರಿಂದ ಅನುಮಾನಗೊಂಡ ಅವರು, ತಾವು ತಂದಿದ್ದ ರಸಗೊಬ್ಬರದಲ್ಲಿ ಉಳಿದಿದ್ದ ಭಾಗವನ್ನು ಪರಿಶೀಲಿಸಿದಾಗ ಕಳಪೆ ರಸಗೊಬ್ಬರ ಎಂಬುದು ಸಾಬೀತಾಗಿದೆ.
ಗೊಬ್ಬರವಲ್ಲ ಮಣ್ಣು: ಮಹೇಶ್ ತಮ್ಮ ಗ್ರಾಮದ ಪಕ್ಕದ ಬೈರನಾಯಕನಹಳ್ಳಿಯಲ್ಲಿರುವ ಜಮೀನಿನಲ್ಲಿ ಬೇಸಿಗೆ ಸಮಯದಲ್ಲಿ ಹಸುಗಳ ಮೇವಿಗೆ ಅನುಕೂಲವಾಗಲಿ ಎಂದು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಗ್ರಾಮದ ಸಮೀಪವಿರುವ ಕುಂಬಾರಕಟ್ಟೆ ಗೇಟ್ನಲ್ಲಿನ ರಸಗೊಬ್ಬರದ ಮಳಿಗೆಯಲ್ಲಿ ಡಿಎಪಿ ಗೊಬ್ಬರ ಖರೀದಿಸಿದ್ದರು. ಅರ್ಧ ಮೂಟೆ ರಸಗೊಬ್ಬರವನ್ನು ಬೆಳೆಗೆ ಹಾಕಿ ಉಳಿದ ಗೊಬ್ಬರವನ್ನು ಹಾಗೆ ಇಟ್ಟಿದ್ದರು. ಗೊಬ್ಬರ ಹಾಕಿದರೂ ನಿರೀತ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅವರು ಮೂಟೆಯಲ್ಲಿ ಉಳಿದಿದ್ದ ರಸಗೊಬ್ಬರವನ್ನು ನೀರುಹಾಕಿ ನೋಡಿದಾಗ ರಸಗೊಬ್ಬರದ ಬದಲು ಮಣ್ಣಿನ ಅಂಶ ಪತ್ತೆಯಾಗಿದೆ. ಗೊಬ್ಬರಕ್ಕೆ ನೀರು ಬೆರೆಸಿದ ತಕ್ಷಣ ಮಣ್ಣಿಗೆ ಬಣ್ಣ ಕಟ್ಟಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ತಾವು ತಂದಿದ್ದು ಗೊಬ್ಬರವಲ್ಲ ಮಣ್ಣು ಎಂಬುದು ಅರಿವಾಗಿದೆ.
ಆಕ್ರೋಶ: 50 ಕೆ.ಜಿ. ಮೂಟೆಗೆ 1300 ರೂ. ನೀಡಿ ರಸಗೊಬ್ಬರ ಖರೀದಿಮಾಡಿದ್ದು, ಒಂದೆಡೆ ಗೊಬ್ಬರಕ್ಕೆ ನೀಡಿದ ಹಣ ಹಾಗೂ ಬೆಳೆ ಎರಡೂ ನಷ್ಟವಾಗಿದೆ. ಸಾಕಷ್ಟು ಮಂದಿ ರಸಗೊಬ್ಬರವನ್ನು ಪರಿಶೀಲಿಸುವುದಿಲ್ಲವಾದ ಕಾರಣ ಈ ರೀತಿಯ ವಂಚನೆ ನಡೆದಿದ್ದರೂ ಬೆಳಕಿಗೆ ಬಂದಿಲ್ಲ. ರೈತರಿಗೆ ರಸಗೊಬ್ಬರದ ಹೆಸರಿನಲ್ಲಿ ಮಣ್ಣಿಗೆ ಬಣ್ಣ ಕಟ್ಟಿ ಮಾರಲಾಗುತ್ತಿದೆ. ರಸಗೊಬ್ಬರದ ಹೆಸರಿನಲ್ಲಿ ಕಳಪೆ ಗುಣಮಟ್ಟದ ಡಿಎಪಿಯನ್ನು ಮಾರಾಟ ಮಾಡಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು, ರೈತರಿಗೆ ನಿರಂತರವಾಗಿ ವಂಚನೆ ಮಾಡುತ್ತಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರೈತ ಮಹೇಶ್ ಹಾಗೂ ಬೇವೂರು ಭಾಗದ ರೈತರು ಆಗ್ರಹಿಸಿದ್ದಾರೆ.
ನಕಲಿ ರಸಗೊಬ್ಬರದ ಜಾಲ?: ರೈತ ಮಹೇಶ್ ರಸಗೊಬ್ಬರ ಪರಿಶೀಲಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿರುವುದು ತಾಲೂಕಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಸಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಇರುವ ಕಾರಣ ಕೆಲ ಕಂಪನಿಗಳು ನಕಲಿ ರಸಗೊಬ್ಬರವನ್ನು ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿವೆಯೇ... ಎಂಬ ಸಂದೇಹ ಶುರುವಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಿ ರೈತರಿಗೆ ವಂಚಿಸುತ್ತಿರುವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮುಂದೆ ರೈತರಿಗೆ ಕಳಪೆ ಗೊಬ್ಬರ ದೊರೆಯದಂತೆ ನೋಡಿಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಅದಕ್ಕಾಗಿ ಕುಂಬಾರಕಟ್ಟೆ ಗೇಟ್ನಲ್ಲಿರುವ ರಸಗೊಬ್ಬರದ ಅಂಗಡಿಯಿಂದ ಡಿಎಪಿ ಗೊಬ್ಬರ ಖರೀದಿಸಿದ್ದೆ. ರಸಗೊಬ್ಬರ ಬೆಳೆ ಮೇಲೆ ಯಾವುದೇ ಪರಿಣಾಮ ಬೀರದ ಕಾರಣ ಅನುಮಾನಗೊಂಡು ಬಳಸದೆ ಉಳಿದಿದ್ದ ರಸಗೊಬ್ಬರಕ್ಕೆ ನೀರು ಹಾಕಿ ಪರಿಶೀಲಿಸಿದಾಗ, ಅದು ರಸಗೊಬ್ಬರವಲ್ಲ ಮಣ್ಣು ಎಂದು ತಿಳಿಯಿತು. ಈಗಾಗಲೇ ರೈತ ಸಮುದಾಯ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ರೈತರಿಗೆ ರಸಗೊಬ್ಬರದ ಬದಲು ಮಣ್ಣು ನೀಡಿ ಯಾಮಾರಿಸುತ್ತಿರುವ ವಂಚಕರನ್ನು ಬಗ್ಗುಬಡಿಯಬೇಕು. ಭವ್ಯಾ, ಮಹೇಶ್ ಪತ್ನಿ ಡಿಎಪಿ ರಸಗೊಬ್ಬರದಲ್ಲಿ ಹೆಚ್ಚಿನ ಮಣ್ಣಿನ ಅಂಶ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಗೊಬ್ಬರದ ಬದಲು ಮಣ್ಣು ಮಾರಾಟ ಮಾರಾಟವಾಗುತ್ತಿರುವ ಬಗ್ಗೆ ಕೆಲ ರೈತರು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಹೋಗಿ ರಸಗೊಬ್ಬರದ ಮಾದರಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿ, ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವದು. ನಕಲಿಯಾಗಿದ್ದರೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಬೊಮ್ಮೇಶ್, ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ ಚನ್ನಪಟ್ಟಣ