

ಎಚ್.ಡಿ.ಕೋಟೆ: ಖರೀದಿದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದು, ತಂಬಾಕಿಗೆ ಉತ್ತಮ ದರ ನೀಡುತ್ತಿಲ್ಲ ಎಂದು ಆರೋಪಿಸಿ ರೈತರು ಸೋಮವಾರ ಪಟ್ಟಣದ ಶಾಂತಿಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ನೂರಾರು ರೈತರು ಹೊಗೆಸೊಪ್ಪು ಮಾರಾಟ ಮಾಡಲು ಬಂಡಲ್‌ಗಳನ್ನು ತಂದು ಹರಾಜು ಪ್ರಾಂಗಣಕ್ಕೆ ಹಾಕಿದರು. ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತಿದಂತೆ ಖರೀದಿದಾರರು ಕಡಿಮೆ ಬೆಲೆಗೆ ಹರಾಜು ಮಾಡಲು ಪ್ರಾರಂಭಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಹರಾಜು ಅಧೀಕ್ಷಕರ ವಿರುದ್ಧ ತಿರುಗಿ ಬಿದ್ದರು. ಉತ್ತಮ ದರ ನಿಗದ ಮಾಡಿ ಹರಾಜು ಪ್ರಕ್ರಿಯೆ ಪ್ರಾರಂಭಿಸಬೇಕು. ಇಲ್ಲವಾದರೆ ಹರಾಜು ಮಾಡುವುದು ಬೇಡ ಎಂದು ಒತ್ತಾಯಿಸಿದರು.
ಹರಾಜು ಅಧೀಕ್ಷಕ ವಿಜಯ್ ಕುಮಾರ್ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ 80 ರೂ. ಹೆಚ್ಚುವರಿಯಾಗಿ ತಂಬಾಕಿಗೆ ಉತ್ತಮ ಬೆಲೆ ಸಿಕ್ಕಿದೆ. ಪ್ರಾರಂಭದಲ್ಲಿ 265ರಿಂದ 270 ರೂ. ಸರಾಸರಿ ಬೆಲೆ ಸಿಕ್ಕಿತ್ತು. ನಂತರದ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಬೆಲೆ ಕಡಿಮೆಯಾಯಿತು. ಅಲ್ಲದೆ, ಕಾರಣಾಂತರಗಳಿಂದ ಬೆಲೆ ಏರಿಕೆ ಆಗಲಿಲ್ಲ. ಖರೀದಿದಾರರು ರೈತರಿಗೆ ಉತ್ತಮ ದರ ನೀಡಲು ತಮ್ಮ ಮೇಲ್ಪಟ್ಟವರೊಂದಿಗೆ ಮಾತನಾಡಿ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಇದರಿಂದ ಸಮಾಧಾನಗೊಳ್ಳದ ರೈತರು ಸ್ಥಳಕ್ಕೆ ವಿಭಾಗೀಯ ಹರಾಜು ಅಧೀಕ್ಷಕರು ಬರಬೇಕು ಹಾಗೂ ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದು, ಹರಾಜು ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬಳಿಕ ಸ್ಥಳಕ್ಕೆ ಬಂದ ವಿಭಾಗೀಯ ಹರಾಜು ಅಧೀಕ್ಷಕ ಲಕ್ಷ್ಮಣ್ ರಾವ್, ರೈತರ ಜತೆ ಸುದೀರ್ಘವಾಗಿ ಮಾತುಕತೆ ನಡೆಸಿ ಮಂಗಳವಾರದಿಂದ ಉತ್ತಮ ದರ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಇದಕ್ಕೂ ತೃಪ್ತಿಯಾಗದ ರೈತ ಮುಖಂಡ ಮೊತ್ತ ಬಸವರಾಜಪ್ಪ, ಮಂಗಳವಾರ ಉತ್ತಮ ದರ್ಜೆಯ ಒಂದು ಕೆ.ಜಿ.ಹೊಗೆಸೊಪ್ಪಿಗೆ 240 ರೂ. ಮೇಲೆ ನೀಡಿದರೆ ಹರಾಜು ಪ್ರಕ್ರಿಯೆ ನಡೆಸಲು ಅನುವು ಮಾಡಿಕೊಡಲಾಗುವುದು. 240 ರೂ. ಒಳಗೆ ಹರಾಜು ನಡೆದರೆ ಹರಾಜು ಪ್ರಕ್ರಿಯೆ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದು. ಇದಲ್ಲದೆ ಹುಣಸೂರು, ಪಿರಿಯಪಟ್ಟಣ, ಕಂಪಾಲಪುರದಲ್ಲೂ ಹರಾಜು ಪ್ರಕ್ರಿಯೆ ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಹರಾಜು ಅಧೀಕ್ಷಕರಾದ ವಿಜಯ್ ಕುಮಾರ್, ಶಂಬುಲಿಂಗೇಗೌಡ, ರೈತ ಮುಖಂಡರಾದ ಮಹೇಶ್, ಸಂಪತ್ತು, ಮಹಾದೇವಸ್ವಾಮಿ, ಪುಟ್ಟಪ್ಪ, ನಾಗೇಶ್, ಸಿದ್ದರಾಜು, ನಂಜುಂಡ ಸ್ವಾಮಿ, ಚಂದ್ರೇಗೌಡ ಇದ್ದರು.