

ವಿಜಯವಾಣಿ ಸುದ್ದಿಜಾಲ ಧಾರವಾಡ
ಹು-ಧಾ ನಗರ ಸೇರಿ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಅನುಮತಿ ಪಡೆಯದೇ ಬಿಲ್ಡರ್‌ಗಳು ಅನಧಿಕೃತ ಲೇಔಟ್ ನಿರ್ಮಿಸಿ, ಗ್ರಾಹಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಕಂತು, ರಿಯಾಯಿತಿಗೆ ಮರುಳಾಗಿ ಮೋಸ ಹೋಗಬಾರದು ಎಂದು ಹುಡಾ ಅಧ್ಯಕ್ಷ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಗಳ ತೆರವುಗೊಳಿಸಲು ವಿವಿಧ ಇಲಾಖಾ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಮಿತಿ ರಚನೆಗೆ ಗುರುವಾರ ಸಭೆ ನಡೆಸಿ ಅವರು ಮಾತನಾಡಿದರು.
ಧಾರವಾಡದ ಗುಲಗಂಜಿಕೊಪ್ಪ ,ಅಮ್ಮಿನಭಾವಿ ರಸ್ತೆ, ಹೆಬ್ಬಳ್ಳಿ ರಸ್ತೆ, ನಿಗದಿ ರಸ್ತೆ ಸೇರಿ ನಗರ ಸುತ್ತಮುತ್ತ ಹಾಗೂ ಹುಬ್ಬಳ್ಳಿ ನಗರದಲ್ಲಿ ಕೆಲವು ಮಾಲೀಕರು, ಬಿಲ್ಡರ್‌ಗಳು ಅನುಮತಿ ಪಡೆಯದೆ ಅನಧಿಕೃತ ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಇಂತಹ ಅಕ್ರಮ ಬಡಾವಣೆಗಳನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ನೋಂದಣಿ ಆಗದ ಸೈಟ್‌ಗಳನ್ನು ಯಾರು ಖರೀದಿಸಬಾರದು. ಬಾಂಡ್ ಮೇಲೆ ಖರೀದಿಸಿದರೆ ನಿಮ್ಮ ಹಣಕ್ಕೆ ಅಥವಾ ಸೈಟ್‌ಗೆ ಸುರಕ್ಷತೆ ಇರುವುದಿಲ್ಲ. ಲೇಔಟ್ ಮಾಲೀಕರು ನೀಡುವ ರಿಯಾಯಿತಿ ಅಥವಾ ಕಂತಿನ ಆಫರ್‌ಗಳಿಗೆ ಮರುಳಾಗಿ ಸೈಟ್ ಖರೀದಿಸಿ ಮೋಸ ಹೋಗಬಾರದು ಎಂದು ಎಚ್ಚರಿಸಿದರು.
ಈಗಾಗಲೇ ಅವಳಿನಗರ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಿದ್ದನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಅವುಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು. ಅನಧಿಕೃತ ಬಡಾವಣೆ ನಿರ್ಮಿಸಿದವರ ವಿರುದ್ಧ ಎಫ್‌ಐಆರ್‌ದೊಂದಿಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.
ಅನಧಿಕೃತ ಬಡಾವಣೆ ನಿರ್ಮಿಸಲು ಸಹಕಾರ ನೀಡುವ ಮತ್ತು ಕಾನೂನು ಬಾಹಿರವಾಗಿ 11ಎ ಸ್ಕೇಚ್, ಖಾತಾ ಉತಾರ ನೀಡುವ, ಇಲಾಖಾ ನೋಂದಣಿ ಮಾಡಿಕೊಳ್ಳುವ ಸಿಬ್ಬಂದಿ ವಿರುದ್ಧ ತನಿಖೆ ಮಾಡಿ, ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸಿ ಸರ್ಕಾರಿ ಕೆಲಸದಿಂದ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೃಷಿ ಭೂಮಿಗಳಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಜಿಲ್ಲೆಯ ಯಾವುದೇ ಸ್ಥಳದಲ್ಲಿ ಅನಧಿಕೃತ ಬಡಾವಣೆ ನಿರ್ಮಾಣವಾಗುತ್ತಿದ್ದರೆ ಸಾರ್ವಜನಿಕರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಅಗತ್ಯವಿದ್ದರೆ ಮಾಹಿತಿದಾರರ ಹೆಸರು ಗೌಪ್ಯವಾಗಿಟ್ಟು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ, ಜಮೀನು ವಶಪಡಿಸಿಕೊಳ್ಳಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪೊಲೀಸ್ ಆಯುಕ್ತ ರಾಜೀವ ಎಂ, ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಹುಬ್ಬಳ್ಳಿ ನಗರ ತಹಸೀಲ್ದಾರ ಕಲ್ಲಗೌಡ ಪಾಟೀಲ, ಹೆಸ್ಕಾಂ ಇಇ, ಎಂ.ಎಂ. ನದಾಫ, ಭೂ ದಾಖಲೆಗಳ ಇಲಾಖೆ, ಹೆಸ್ಕಾಂ, ಉಪನೋಂದಣಿ, ಜಲಮಂಡಳಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.