

ಬೆಳಗಾವಿ: ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರ ಸೂರ್ಯಕಾಂತಿ, ಹೆಸರು ಕಾಳು ಖರೀದಿಸಬಾರದು. ನೋಂದಣಿ ಮಾಡಿಕೊಂಡ ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಮಾತ್ರ ಹಣ ಜಮೆ ಮಾಡಬೇಕು. ದುರಪಯೋಗ ಕಂಡು ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ರಾಮದುರ್ಗ ಹಾಗೂ ಸವದತ್ತಿ ಟಿಎಪಿಸಿಎಂಎಸ್ ಲಿಮಿಟೆಡ್ ಎರಡು ಸೂರ್ಯಕಾಂತಿ ಖರೀದಿ ಕೇಂದ್ರ ಹಾಗೂ ರಾಮದುರ್ಗ, ಹುಲಕುಂದ, ಸವದತ್ತಿ, ಮುರಗೋಡ, ಯರಗಟ್ಟಿ, ಬೈಲಹೊಂಗಲ, ದೊಡವಾಡ ಸೇರಿ ಏಳು ಹೆಸರು ಕಾಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ನೋಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದೆ. ಈ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ದುರುಪಯೋಗ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದೂ ಸೂಚಿಸಿದರು.
ಈ ವರ್ಷ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ 47,000 ಹಾಗೂ ಹೆಸರು ಕಾಳು 2,47,500 ಕ್ವಿಂಟಾಲ್ ಇಳುವರಿ ನಿರೀೆ ಇದೆ. ಪ್ರತಿ ಎಕರೆಗೆ ಕನಿಷ್ಠ 3 ರಿಂದ15 ಕ್ವಿಂಟಾಲ್ ಸೂರ್ಯಕಾಂತಿ, 2 ರಿಂದ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಪ್ರಮಾಣ ನಿಗದಿ ಪಡಿಸಲಾಗಿದೆ.
ಬೆಂಗಳೂರಿನ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ (ಕೆಓಎಫ್) ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ, ನಾಫೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಗುರುತಿಸಲಾಗಿದೆ. ಹಾಗಾಗಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಜಿಲ್ಲೆಯಲ್ಲಿ ಅವಶ್ಯಕತೆಗನುಗುಣವಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ನಾಫೆಡ್ ಸಂಸ್ಥೆಯೊಂದಿಗೆ ಸಮಾಲೋಚಿಸಿ ನಿರ್ಧರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.