

ನರಗುಂದ: ಎಪಿಎಂಸಿ ಪ್ರಾಂಗಣದಲ್ಲಿರುವ ಬೆಂಬಲ ಬೆಲೆ ಹೆಸರು ಖರೀದಿ ಕೇಂದ್ರವನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಸೋಮವಾರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗ್ರೇಡಿಂಗ್ ಮತ್ತು ದಾಸ್ತಾನಿಗೆ ಸೂಕ್ತ ಸ್ಥಳಾವಕಾಶವಿಲ್ಲ ಎಂದು ಹೇಳಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಇಲ್ಲಿನ ಅಧಿಕಾರಿಗಳು ಏಕಾಏಕಿ ಬಂದ್ ಮಾಡಿದ್ದಾರೆ. ಇದರಿಂದ ನಗರದ ಖಾಸಗಿ ವ್ಯಾಪಾರಸ್ಥರಿಗೆ ಅನುಕೂಲವಾಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಹೆಸರು ಖರೀದಿ ಕೇಂದ್ರ ಬಂದ್ ಮಾಡಿರುವುದು ಅಕ್ಷಮ್ಯ ಅಪರಾಧ. ರೈತರು ರಾತ್ರಿಯಿಡೀ ಸುರಿಯುತ್ತಿರುವ ಜಿಟಿಜಿಟಿ ಮಳೆಯಲ್ಲಿಯೇ ಖರೀದಿ ಕೇಂದ್ರದ ಬಾಗಿಲು ಕಾಯುವಂತಾಗಿದೆ. ದಿನ ಕಳೆದಂತೆ ಹೆಸರು ಉತ್ಪನ್ನಗಳ ತೂಕ ಕಡಿಮೆ ಆಗುತ್ತಿದೆ. ಹಣ ಕೊಟ್ಟವರ ಉತ್ಪನ್ನ ಯಾವುದೇ ತಕರಾರಿಲ್ಲದೆ ಖರೀದಿಸುತ್ತಿದ್ದು, ನೋಂದಣಿ ಮಾಡಿಸಿಕೊಂಡಿರುವ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ರೈತರು, ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ಅಧಿಕಾರಿ ಸಚಿನ್ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಹಕಾರಿ ಮಾರಾಟ ಮಹಾಮಂಡಳ ಬೆಳಗಾವಿ ವಿಭಾಗದ ರಿಜನಲ್ ಮ್ಯಾನೇಜರ್ ಮಲ್ಲಿಕಾರ್ಜುನ ಮಲ್ಲಣ್ಣವರ ಮಾತನಾಡಿ, ಬೆಳಗಾವಿ ವಿಭಾಗ ವ್ಯಾಪ್ತಿಯ ಒಟ್ಟು 7 ಜಿಲ್ಲೆಗಳಲ್ಲಿ ಆ.22 ರಿಂದ ರೈತರ ಹೆಸರು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಧಾರವಾಡದಲ್ಲಿ 1446 ಕ್ವಿಂಟಾಲ್, ಬೆಳಗಾವಿಯಲ್ಲಿ 2593 ಕ್ವಿಂಟಾಲ್, ಗದಗ ಜಿಲ್ಲೆಯಲ್ಲಿ 44,337 ಕ್ವಿಂಟಾಲ್ ಹೆಸರನ್ನು ಇದುವರೆಗೆ ಖರೀದಿ ಮಾಡಿಕೊಳ್ಳಲಾಗಿದೆ. ನರಗುಂದ ತಾಲೂಕಿನ ಒಟ್ಟು 9 ಖರೀದಿ ಕೇಂದ್ರಗಳಿಂದ 17,592 ಕ್ವಿಂಟಾಲ್ ಹೆಸರನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗಿದೆ. ಸರ್ಕಾರದ ನಿಯಮಾನುಸಾರ ಹೆಸರು ಶೇ.12 ರಷ್ಟು ಗ್ರೇಡ್ ಹೊಂದಿರುವುದು ಕಡ್ಡಾಯ. ಆದರೆ, ಶೀತಮಯ ವಾತಾವರಣದಿಂದ ಬಹುತೇಕ ರೈತರ ಹೆಸರು ಗ್ರೇಡ್ ಬರುತ್ತಿಲ್ಲ. ದಾಸ್ತಾನಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ನೋಂದಣಿ ಮಾಡಿಸಿಕೊಂಡ ಪ್ರತಿಯೊಬ್ಬ ರೈತರ ಹೆಸರು ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಿ ಮಂಗಳವಾರದಿಂದ ಖರೀದಿ ಮಾಡಿಕೊಳ್ಳಲಾಗುತ್ತದೆ. ಖರೀದಿ ಕೇಂದ್ರ ಬಂದ್ ಮಾಡಿ ರೈತರಿಗೆ ವಿನಾಕಾರಣ ಸಮಸ್ಯೆಯನ್ನುಂಟು ಮಾಡಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ತಿಳಿಸಿದಾಗ ರೈತರು ಸಮ್ಮತಿ ವ್ಯಕ್ತಪಡಿಸಿದರು.
ಮುತ್ತು ಆದೆಪ್ಪನವರ, ಸಿದ್ದಪ್ಪ ನಾಯ್ಕರ, ಬಸವರಾಜ ಉಳ್ಳಾಗಡ್ಡಿ, ಮಂಜು ಪಿಡ್ನಾಯ್ಕರ, ಮಹೇಶ ಗಾಡಗೋಳಿ, ಅಯ್ಯೂಬ್ಖಾನ್ ಲೋಧಿ, ನರಸಪ್ಪ ಮಜ್ಜಗಿ, ಚಂದ್ರಶೇಖರ ರಾಮದುರ್ಗ, ದೇವಪ್ಪ ಹೂಗಾರ, ಮಲ್ಲೇಶಪ್ಪ ಶಾನವಾಡ ಇತರರಿದ್ದರು.