

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ತಾಂವಶಿ ಗ್ರಾಮದ ಖಡಕ್ ದುರ್ಗಾದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಹೋಮ-ಹವನದೊಂದಿಗೆ ದೇವಿ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಗ್ರಾಮಸ್ಥರು ಅಗ್ರಾಣಿ ನದಿಯಿಂದ ದೇವಸ್ಥಾನವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ದೇವಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಅಗ್ರಾಣಿ ನದಿಯಲ್ಲಿ ಗಂಗಾಪೂಜೆ ಮಾಡಲಾಯಿತು. ವಿವಿಧ ಕಲಾವಿದರು, ಸುಮಂಗಲೆಯರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಈರಗಾರಿಕೆ ಮತ್ತು ದೇವಿಯ ಹರಕೆಯ ನುಡಿ ಹೇಳಲಾಯಿತು. ಭಕ್ತರು ದೇವಿಗೆ ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ಅನ್ನಪ್ರಸಾದ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆ ಹಾಗೂ ಮನರಂಜನೆ ಕಾರ್ಯಕ್ರಮಗಳು ಜಾತ್ರೆಗೆ ಮೆರುಗು ನೀಡಿದವು.
ನಿಂಗಪ್ಪ ಪೂಜಾರಿ, ಎನ್. ಪ್ರಶಾಂತರಾವ, ರಾವಸಾಬ ಐಹೊಳೆ, ರಾಮಗೌಡ ಲಕಗೌಡರ, ಅಪ್ಪಾಸಾಬ ಪಾಟೀಲ, ಸುರೇಶ ಶಿಂಧೆ, ಅಶೋಕ ಗೌರಗೊಂಡ, ಅಬ್ಬಾಸ್ ಮುಲ್ಲಾ, ಶಿವಯ್ಯ ಹಿರೇಮಠ, ಅಲಗೊಂಡ ಲಕಗೌಡರ, ರುದ್ರ ರಣಧೀರ, ಗಂಗಾರಾಮ ಆರ್., ಸೈನಿಕ ಮುರಗೆಪ್ಪ ಬಿಳ್ಳೂರ, ಬಾವುಸಾಬ ಶಿಂಧೆ ಇತರರಿದ್ದರು.