ಖಜಾನೆ ಭರ್ತಿಗೆ ಜನರ ಶೋಷಣೆ

Published on

ಕಾಂಗ್ರೆಸ್​ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಸೋಮಣ್ಣ ವಾಗ್ದಾಳಿ

ತುಮಕೂರು: ರಾಜ್ಯದ ಖಜಾನೆ ಖಾಲಿಯಾಗಿದ್ದು, ಹಣಕ್ಕಾಗಿ ಕಾಂಗ್ರೆಸ್​ ಸರ್ಕಾರ ಎಲ್ಲ ರೀತಿಯಲ್ಲೂ ಜನರನ್ನು ಶೋಷಣೆ ಮಾಡುತ್ತಿದೆ. ಇತ್ತೀಚೆಗೆ ಸಣ್ಣಪುಟ್ಟ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡುವ ಮೂಲಕ ಬರೆ ಎಳೆಯುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹರಿಹಾಯ್ದರು.

ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಸಿದ್ದಲಿಂಗ ಶ್ರೀಗಳ ಜನ್ಮದಿನದ ಅಂಗವಾಗಿ ಗೌರವ ಸಮರ್ಪಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತು. ಕೇಂದ್ರ ಸರ್ಕಾರ ಬಾಕಿ ತೆರಿಗೆ ಹಣ ನೀಡುತ್ತಿಲ್ಲ ಎಂದು ಪದೇಪದೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಯಾವುದನ್ನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕು ಎಂಬುದನ್ನು ಅವರು ತಿಳಿಯಬೇಕು. ಜಿಎಸ್​ಟಿ ಸಭೆೆ, ಪ್ರಧಾನ ಮಂತ್ರಿಗಳ ಸಭೆಯಲ್ಲಿ ಭಾಗವಹಿಸುವ ಸೌಜನ್ಯ ಸಿದ್ದರಾಮಯ್ಯ ಅವರಿಗಿಲ್ಲ. ಆದರೆ, ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ವರ್ತನೆ ಬದಲಿಸಿಕೊಳ್ಳಲಿ ಎಂದರು.

ಸಂಸತ್​ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ನಂತರ ಚರ್ಚೆ ಮಾಡಲು ಅವಕಾಶವಿದೆ. ನಂತರ ಆಪರೇಷನ್​ ಸಿಂಧೂರ ವಿಚಾರ ಚರ್ಚೆ ಮಾಡೋಣ ಎಂದು ಲೋಕಸಭೆ ಅಧ್ಯಕ್ಷರು ಹೇಳಿದರೂ ಕಾಂಗ್ರೆಸ್ಸಿಗರು ಅನವಶ್ಯಕವಾಗಿ ಗೊಂದಲ ಸೃಷ್ಟಿಸಿ ಕಲಾಪ ನಡೆಯದಂತೆ ಮಾಡಿರುವುದು ಸರಿಯಲ್ಲ ಎಂದು ಬೇಸರಿಸಿದರು. ಮುಖಂಡರಾದ ಎಸ್​.ಶಿವಪ್ರಸಾದ್​, ವೈ.ಎಚ್​.ಹುಚ್ಚಯ್ಯ, ಡಾ.ಎಸ್​.ಪರಮೇಶ್​, ಮಹದೇವಯ್ಯ, ಹಕ್ಕೊತ್ತಾಯ ಬಸವರಾಜು, ಸಾಗರನಹಳ್ಳಿ ವಿಜಯಕುಮಾರ್​, ರುದ್ರೇಶ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net