ಖಂಡುಗದಹಳ್ಳಿಗೆ ಪಾದಯಾತ್ರೆ

kdr padayatrey
ಕಡೂರಿನಿಂದ ಖಂಡುಗದಹಳ್ಳಿ ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಪಾದಯಾತ್ರೆ ನಡೆಸಿದರು. ಕೆ.ಬಿ.ಸೋಮೇಶ್, ಕಂಸಾಗರ ಸೋಮಶೇಖರ್, ಮಂಜು, ಕೆ.ಸಿ.ಸೋಮೇಶ್, ಶೇಖರಪ್ಪ ಇತರರಿದ್ದರು.
Published on

ಕಡೂರು: ತಾಲೂಕಿನಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಶಿವನ ದೇವಾಲಯಗಳಲ್ಲಿ ನಾಮಸ್ಮರಣೆಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿದವು.

ಪಟ್ಟಣದ ಶ್ರೀ ಮಲಿಯಮ್ಮ ದೇವಸ್ಥಾನದ ಆವರಣದಲ್ಲಿ ಭಕ್ತರು ಖಂಡುಗದಹಳ್ಳಿ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರಥಮ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ ರಾತ್ರಿ ದೇವಾಲಯವನ್ನು ತಲುಪಿದರು. ಸಂಜೆ ದೇವಾಲಯದಲ್ಲಿ ಭಜನೆ ಸೇರಿದಂತೆ ಜಾಗರಣೆಯ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ದೇವಾಲಯದ ಧರ್ಮದರ್ಶಿ ಕೆ.ಬಿ.ಸೋಮೇಶ್ ಮಾತನಾಡಿ, ಪ್ರಥಮ ವರ್ಷ ಭಕ್ತರು ಪಾದಯಾತ್ರೆ ಕೈಗೊಂಡರು. ಮುಂದಿನ ದಿನಗಳಲ್ಲಿ ಮತ್ತಷ್ಟು ಭಕ್ತರ ಪ್ರಮಾಣ ಹೆಚ್ಚಲಿದೆ ಎಂದರು.

ಕೆ.ಸಿ.ಸೋಮೇಶ್, ಕೆ.ಎಸ್.ಮಂಜುನಾಥ್, ಕಂಸಾಗರ ಸೋಮಶೇಖರ್, ಹಳೇಪೇಟೆ ಶೇಖರಪ್ಪ, ಗೋವಿಂದಪ್ಪ, ಕೆ.ಜಿ.ಲೋಕೇಶ್, ಕೆ.ಜಿ.ಸೋಮಶೇಖರ್ ಹಾಗೂ ಮಹಿಳಾ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ 108 ಏಕ ಶತರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರಹೋಮ, ಪೂರ್ಣಾಹುತಿ ನಡೆಸಲಾಯಿತು. ಟ್ರಸ್ಟ್‌ನಿಂದ ಭಕ್ತರು ಶಿವನ ಲಿಂಗಕ್ಕೆ ಕ್ಷೀರಾಭಿಷೇಕ ಮಾಡಲು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಸಂಜೆ ಭಜನೆ ಏರ್ಪಡಿಸಲಾಗಿತ್ತು.

ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಾಲಯದ ಮುಂಭಾಗದಲ್ಲಿರುವ ಕೈಲಾಸ ಶಿವನ ಪ್ರತಿಮೆಗೆ ವಿಶೇಷ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಪಟ್ಟಣದ ಶ್ರೀ ಅರೇಕಲ್ ಭುವನೇಶ್ವರ ಸ್ವಾಮಿ ದೇವಾಲಯ, ಕೋಟೆಯ ಗಂಗಾಧರೇಶ್ವರ, ಸಾಯಿಬಾಬಾ ದೇವಾಲಯ, ಸಿಂಗಟಗೆರೆಯ ಕಲ್ಲೇಶ್ವರ ಸ್ವಾಮಿ, ಯಗಟಿಪುರದ ಮಲ್ಲಿಕಾರ್ಜುನ ಸ್ವಾಮಿ, ಹೇಮಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಹಿರೇನಲ್ಲೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಸಖರಾಯಪಟ್ಟಣದ ಕಲ್ಮರುಡೇಶ್ವರ, ಕೇದಿಗೆರೆ ಬಳಿಯ ಶ್ರೀ ಎರೆ ಬೀರಲಿಂಗೇಶ್ವರ ಸ್ವಾಮಿಯ ಮೂಲ ದೇವಸ್ಥಾನದಲ್ಲಿ ವಿಶೇಷ ಭಜನಾ ಕಾರ್ಯಕ್ರಮಗಳು ಜರುಗಿದವು. ಗ್ರಾಮೀಣ ಭಾಗದ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶಾಸೋಕ್ತವಾಗಿ ಜರುಗಿದವು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಕುಂಭಮೇಳದಿಂದ ತಂದ ಪವಿತ್ರ ಗಂಗಾಜಲವನ್ನು ತಾಲೂಕಿನ ಎಲ್ಲ ಶಿವನ ದೇವಾಲಯಗಳಿಗೆ ಹಾಗೂ ಭಕ್ತರಿಗೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net