ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ

Karajola
Published on

ಚಿತ್ರದುರ್ಗ: ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಜನ ನನ್ನ ಮೇಲಿಟ್ಟಿರುವ ವಿಶ್ವಾಸ ಹುಸಿಯಾಗಿಸದೆ, ಎಲ್ಲರ ಸಲಹೆ ಸಹಕಾರದೊಂದಿಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಬಿಜೆಪಿ ಸಂಸದ ಗೋವಿಂದ ಎಂ ಕಾರಜೋಳ ಭರವಸೆ ನೀಡಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ವಿಜಯದ ನಗೆ ಬೀರಿದ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ‘ಗೋ ಬ್ಯಾಕ್’ ಎಂದವರಿಗೆ ಫಲಿತಾಂಶವೇ ಉತ್ತರ ನೀಡಿದೆ. ಜನಾಶೀರ್ವಾದದ ಗೆಲುವನ್ನು ಮತದಾರರಿಗೆ ಸಮರ್ಪಿಸುತ್ತಿದ್ದೇನೆ. ಎಲ್ಲ ಸಮುದಾಯದವರು ಸಹಕರಿಸಿದ್ದಾರೆ ಎಂದರು.

ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿ ಆಗುವುದು ನಿಶ್ಚಿತ. ನಾನೂ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಅಭ್ಯರ್ಥಿಯಾಗಿದ್ದು, ಇಲ್ಲಿಗೆ ನಾಮಪತ್ರ ಸಲ್ಲಿಸುವ ವೇಳೆ ಪ್ರವೇಶಿಸಿ, ಅಲ್ಪ ಸಮಯ ದೊರೆತರೂ ಮೋದಿ ಅಲೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ ವರ್ಚಸ್ಸು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಬಿಜೆಪಿ-ಜೆಡಿಎಸ್ ನಾಯಕರು, ಕಾರ್ಯಕರ್ತರು ಶಕ್ತಿ ಮೀರಿ ಹಗಲಿರುಳು ಶ್ರಮಿಸಿದ್ದರಿಂದಾಗಿಯೂ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಈ ಹಿಂದೆ ನೀರಾವರಿ ಸಚಿವನಾಗಿದ್ದ ಅವಧಿಯಲ್ಲಿ ಚೆಕ್ ಡ್ಯಾಂ, ಬದು ನಿರ್ಮಾಣ ಸೇರಿ ರೈತರಿಗೆ ಅನುಕೂಲವಾಗುವ ಕೆಲಸ ಮಾಡಿದ್ದೇನೆ. ಉತ್ತಮ ಅಭ್ಯರ್ಥಿ ಎಂಬುದು ಮತದಾರರ ಮನಸ್ಸಿನಲ್ಲೂ ಇತ್ತು. ಹೀಗಾಗಿ ಏಳು ಮಂದಿ ಶಾಸಕರನ್ನು ಹಿಂದಿಕ್ಕಿ, ಹೊಸ ಮುಖವಾದರೂ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಗ್ಯಾರಂಟಿ ಆಮಿಷದ ಕಾಂಗ್ರೆಸ್ ಮೋಸಕ್ಕೆ ಜನ ಕಿವಿಗೊಡಲಿಲ್ಲ ಎಂದರು.

ಚುನಾವಣೆ ವೇಳೆಯಲ್ಲಿ ಮಾತ್ರ ಪಕ್ಷ, ಅಭ್ಯರ್ಥಿ. ಈಗ ಕ್ಷೇತ್ರದ ಸಂಸದನಾಗಿ, ಪಕ್ಷಾತೀತವಾಗಿ ನೀರಾವರಿ, ರೈಲ್ವೆ ಸೇರಿ ಇನ್ನಿತರೆ ಯೋಜನೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿ ಅನುಷ್ಠಾನಕ್ಕಾಗಿ ಶ್ರಮಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ಮುಖಂಡರಾದ ಸುರೇಶ್ ಸಿದ್ಧಾಪುರ, ಸಂಪತ್‌ಕುಮಾರ್, ಉಮೇಶ್ ಕಾರಜೋಳ, ಮಾಧುರಿ ಗಿರೀಶ್, ನವೀನ್ ಚಾಲುಕ್ಯ, ಮೋಹನ್, ಪ್ರತಾಪ್‌ಜೋಗಿ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net