

ಬೇಲೂರು: ಕನ್ನಡ ಭಾಷೆಯ ಪ್ರಥಮ ಶಿಲಾ ಶಾಸನ ಲಭಿಸಿದ ಬೇಲೂರು ಕ್ಷೇತ್ರದ ಹಲ್ಮಿಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಬೇಲೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ ಯೋಜನೆಯ 70 ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಲ್ಮಿಡಿ ಗ್ರಾಮಕ್ಕೆ 70 ಲಕ್ಷ ರೂ. ಸೇರಿದಂತೆ 3 ಕೋಟಿ ರೂ. ಅನುದಾನದಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೆ ಈಗಾಗಲೇ ಹಲ್ಮಿಡಿ ಗ್ರಾಮಕ್ಕೆ ಪ್ರವಾಸೋದ್ಯಮ ಇಲಾಖೆ ಸಚಿವರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಲಾಗಿದೆ. ಚನ್ನಾಪುರ ಗಡಿಯಿಂದ ಹಲ್ಮಿಡಿವರೆಗಿನ ರಸ್ತೆ ಕಾಮಗಾರಿ ಸಹ ನಡೆಯಲಿದೆ ಎಂದು ಭರವಸೆ ನೀಡಿದರು.
ನಾರಾಯಣಪುರ ಗ್ರಾಮ ಪಂಚಾಯಿತಿ ಸದಸ್ಯ ಕೇಳಹಳ್ಳಿ ರಾಜು ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ರಂಗೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಲೋಕೇಶ್, ಲೋಕೋಪಯೋಗಿ ಇಲಾಖೆಯ ಎಇಇ ಪುಟ್ಟಸ್ವಾಮಿ, ಎಇ ಗಳಾದ ಮಂಜುನಾಥ್, ಸೋಮಶೇಖರ್, ಮಹೇಶ್, ಗುತ್ತಿಗೆದಾರ ಪುಟ್ಟಸ್ವಾಮಿ ಗ್ರಾಮಸ್ಥರಾದ ಪುರುಷೋತ್ತಮ್, ದೇವರಾಜ್, ಶಾಂತಕುಮಾರ್, ಸತೀಶ್, ಪ್ರವೀಣ್ ಇತರರು ಇದ್ದರು.